ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೋವಾಗಿದ್ದರೆ, ಹೆಚ್ಚು ಟೆನ್ಷನ್‌ ಆಗಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಅದನ್ನು ಬಿಟ್ಟು ಸ್ಥಾನದ ಘನತೆ ಮರೆತು ಹೇಳಿಕೆ ನೀಡಬಾರದು ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್‌ ಯತ್ನಾಳ ಹರಿಹಾಯ್ದರು.

ಬೆಂಗಳೂರು : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಗರ ನಕ್ಸಲೈಟ್‌ ಇರಬೇಕು ಎಂದು ಬಿಜೆಪಿ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ ಆಪಾದಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಂಗೆಗೆ ಪ್ರಚೋದನೆ ಮಾಡುತ್ತಾರೆ ಎಂದರೆ ಕುಮಾರಸ್ವಾಮಿ ಅವರು ನಗರ ನಕ್ಸಲೈಟ್‌ ಇರಬೇಕು. ಅವರು ಹೀಗೆಯೇ ಬಹಳಷ್ಟು ಬಾಯಿ ಹರಿಬಿಟ್ಟರೆ ನಮಗೂ ಗೊತ್ತಿದೆ. ನಾವೂ ಇಂಥದ್ದಕ್ಕೆಲ್ಲ ಉತ್ತರ ನೀಡುವುದನ್ನು ಕರಗತ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಆ ಸ್ಥಾನದ ಗೌರವದಿಂದ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅವರಿಗೆ ನೋವಾಗಿದ್ದರೆ, ಹೆಚ್ಚು ಟೆನ್ಷನ್‌ ಆಗಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಅದನ್ನು ಬಿಟ್ಟು ಸ್ಥಾನದ ಘನತೆ ಮರೆತು ಹೇಳಿಕೆ ನೀಡಬಾರದು ಎಂದು ಹರಿಹಾಯ್ದರು.