ಗೂಡ್ಸ್‌ ಆಟೋದಲ್ಲಿ ಅಕ್ಕಿ ತುಂಬಿದ ಚೀಲದ ಮಧ್ಯೆ ಅಮಾನ್ಯೀಕರಣಗೊಂಡ ಹಳೆ ನೋಟುಗಳನ್ನು ಸಾಗಿಸುತ್ತಿದ್ದ ವಕೀಲ, ಎಂಜಿನಿಯರ್‌ ಸೇರಿ 6 ಮಂದಿ ಆರೋಪಿಗಳನ್ನು ಮೈಕೋ ಲೇಔಟ್‌ ಠಾಣೆ ಪೊಲೀಸರು ಬಂಧಿಸಿ . 2.80 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ಜಪ್ತಿ ಮಾಡಿದ್ದಾರೆ

ಬೆಂಗಳೂರು(ಜೂ.10): ಗೂಡ್ಸ್‌ ಆಟೋದಲ್ಲಿ ಅಕ್ಕಿ ತುಂಬಿದ ಚೀಲದ ಮಧ್ಯೆ ಅಮಾನ್ಯೀಕರಣಗೊಂಡ ಹಳೆ ನೋಟುಗಳನ್ನು ಸಾಗಿಸುತ್ತಿದ್ದ ವಕೀಲ, ಎಂಜಿನಿಯರ್‌ ಸೇರಿ 6 ಮಂದಿ ಆರೋಪಿಗಳನ್ನು ಮೈಕೋ ಲೇಔಟ್‌ ಠಾಣೆ ಪೊಲೀಸರು ಬಂಧಿಸಿ . 2.80 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ಜಪ್ತಿ ಮಾಡಿದ್ದಾರೆ

ವಕೀಲ ದೊಮ್ಮಲೂರಿನ ಕೆ.ಬಿ.ಮರಿರೆಡ್ಡಿ (60), ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಎಂಜಿನಿಯರ್‌ ಬಾನೂಜಿ (59), ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ಯಲಹಂಕ ನಿವಾಸಿ ಆರ್‌.ಹರೀಶ್‌ (50), ತಾವರೆಕೆರೆಯ ಚಂದ್ರಶೇಖರ್‌ (60), ಬನಶಂಕರಿಯ ಜಿ.ದಿನೇಶ್‌(40) ಹಾಗೂ ಗೂಡ್ಸ್‌ ಆಟೋ ಚಾಲಕ ಬಿಟಿಎಂ ಲೇಔಟ್‌ ನಿವಾಸಿ ಎಸ್‌.ದಿನೇಶ್‌(30) ಬಂಧಿತರು.

ಪ್ರಕರಣದ ಪ್ರಮುಖ ಆರೋಪಿ ಕತ್ರಿಗುಪ್ಪೆಯ ಶ್ರೀನಿವಾಸನಗರದ ನಿವಾಸಿ ರಮೇಶ್‌ ಎಂಬುವರಿಗೆ ಹಣ ಸೇರಿದ್ದು ಎಂದು ತಿಳಿದು ಬಂದಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ರಮೇಶ್‌ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಅಲ್ಲದೆ, ಹಣವನ್ನು ಮಹಿಳೆಯೊಬ್ಬರ ಬಳಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಹೇಳಿದರು.

ಹಳೇಯ 500, 1000 ಮುಖಬೆಲೆಯ ನೋಟು ರದ್ದುಗೊಂಡು ಬಳಿಕ ರಮೇಶ್‌ ನೋಟು ಬದಲಾವಣೆಗೆ ಯತ್ನಿಸುತ್ತಿದ್ದರು. ಈ ಬಗ್ಗೆ ಪರಿಚಯಸ್ಥ ದಿನೇಶ್‌ ಬಳಿ ಹೇಳಿಕೊಂಡಿದ್ದರು. ಬಳಿಕ ರಮೇಶ್‌ ಮರಿರೆಡ್ಡಿಯ ಜತೆ ನೋಟು ಬದಲಾವಣೆ ಬಗ್ಗೆ ಮಾತನಾಡಿದ್ದರು. ಆರೋಪಿಗಳು ಗುರುವಾರ ಸಂಜೆ ಗೂಡ್ಸ್‌ ಆಟೋದಲ್ಲಿ ಅಕ್ಕಿ ತುಂಬಿದ ಎರಡು ಚೀಲಗಳಲ್ಲಿ ರದ್ದಾದ . 2.80 ಕೋಟಿ ಹಣವನ್ನು ತುಂಬಿಕೊಂಡು ಬರುತ್ತಿದ್ದರು.

ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಹಣ ತುಂಬಿದ ಚೀಲಗಳು ಕಾಣದಂತೆ ಪಕ್ಕದಲ್ಲಿ ಗ್ಯಾಸ್‌ ಸಿಲಿಂಡರ್‌, ತೆಂಗಿನಕಾಯಿ ಚಿಪ್ಪು ತುಂಬಿದ ಚೀಲ ಹಾಗೂ ಇತರೆ ವಸ್ತುಗಳನ್ನು ಇಟ್ಟಿದ್ದರು.

ಹಣ ಇದ್ದ ಗೂಡ್ಸ್‌ ಆಟೋವನ್ನು ಇತರೆ ಆರೋಪಿಗಳು ಎರಡು ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ವಿಜಯಬ್ಯಾಂಕ್‌ ಲೇಔಟ್‌ ಬಿಬಿಎಂಪಿ ಆಟದ ಮೈದಾನ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಡಿಸಿಪಿ ವಿವರಿಸಿದರು.

ಖೋಟ ನೋಟು ಪತ್ತೆ!: ಅಮ್ಯಾನೀಕ ರಣಗೊಂಡು ನೋಟುಗಳ ಜತೆ .2 ಲಕ್ಷ ಮೌಲ್ಯದ ಸಾವಿರ ಮುಖಬೆಲೆಯ 102 ಹಾಗೂ 500 ಮುಖಬೆಲೆಯ 200 ಖೋಟ ನೋಟುಗಳು ಪತ್ತೆಯಾಗಿವೆ. ಆರೋಪಿಗಳ ವಿರುದ್ಧ ಮೈಕೋಲೇಔಟ್‌ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿ ಮಾಹಿತಿ ನೀಡಿದರು.