ಹುಬ್ಬಳ್ಳಿ :  ಸಾಲ ಮರು ಪಾವತಿಸದ ರೈತರಿಗೆ ಕಿರುಕುಳ ನೀಡುವ ಬ್ಯಾಂಕ್‌ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಖಡಕ್‌ ಎಚ್ಚರಿಕೆ ನೀಡಿದ ಹೊರತಾಗಿಯೂ ತಾಲೂಕಿನ ಬಂಡಿವಾಡ ಗ್ರಾಮದ 50ಕ್ಕೂ ಹೆಚ್ಚು ಸುಸ್ತಿದಾರ ರೈತರ ಖಾತೆಗಳನ್ನು ಅಲ್ಲಿನ ವಿಜಯಾ ಬ್ಯಾಂಕ್‌ ಶಾಖೆ ನಿಷ್ಕ್ರೀಯಗೊಳಿಸಿದೆ.

ಸುಸ್ತಿದಾರ ರೈತರಿಗೆ ಜಾಮೀನು ನೀಡಿರುವ ರೈತರ ಖಾತೆಗಳನ್ನೂ ‘ಬ್ಲಾಕ್‌’ ಮಾಡಲಾಗಿದೆ. ಕಳೆದ 15 ದಿನಗಳಿಂದ ಈ ಖಾತೆಗಳು ನಿಷ್ಕ್ರೀಯವಾಗಿವೆ. ಹೀಗೆ ಖಾತೆಗಳನ್ನು ಬ್ಲಾಕ್‌ ಮಾಡುವ ಕುರಿತಂತೆ ಯಾವುದೇ ಮುನ್ಸೂಚನೆಯನ್ನೂ ನೀಡಿಲ್ಲ. ಬ್ಯಾಂಕ್‌ ಅಧಿಕಾರಿಗಳ ಈ ಕ್ರಮದಿಂದಾಗಿ ಖಾತೆ ನಿಷ್ಕ್ರೀಯಗೊಂಡಿರುವ ಗ್ರಾಹಕರು ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ಹಣ ಪಡೆಯಲಾಗದ ಸ್ಥಿತಿ ಎದುರಾಗಿದೆ.

ಇತ್ತೀಚೆಗೆ ರೈತ ಬಸವರಾಜ ಎಂಬುವರು ಧರ್ಮಸ್ಥಳಕ್ಕೆ ಹೋಗಿದ್ದರು. ಅಲ್ಲಿನ ಎಟಿಎಂನಲ್ಲಿ ದುಡ್ಡು ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಜತೆಗೆ ನಿಮ್ಮ ಖಾತೆ ಬ್ಲಾಕ್‌ ಮಾಡಲಾಗಿದೆ ಎಂದು ರಸೀದಿ ಬಂದಿದೆ. ಇದರಿಂದ ಗಾಬರಿಯಾದ ಅವರು ಬ್ಯಾಂಕಿಗೆ ಫೋನ್‌ ಮಾಡಿ ವಿಚಾರಿಸಿದಾಗ ‘ನೀವು ಕಟಬಾಕಿದಾರರಾಗಿದ್ದೀರಿ, ಹಾಗಾಗಿ ನಿಮ್ಮ ಖಾತೆಯನ್ನು ನಿಷ್ಕಿ್ರಯ ಮಾಡಲಾಗಿದೆ’ ಎನ್ನುವ ಉತ್ತರ ಬಂದಿದೆ.

ಊರಿಗೆ ಮರಳಿದ ನಂತರ ಈ ವಿಷಯವನ್ನು ಅವರು ಕೆಲವರಿಗೆ ಹೇಳಿದ್ದಾರೆ. ಅವರು ಕೂಡ ಎಟಿಎಂಗೆ ಹೋಗಿ ಪರಿಶೀಲಿಸಿದಾಗ ಅವರಿಗೂ ಅಂಥದೆ ರಸೀದಿ ಬಂದಿದೆ. ಆಗ ಊರಿನ ಬಹುತೇಕ ಕಟಬಾಕಿದಾರ ರೈತರು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ 50ಕ್ಕೂ ಹೆಚ್ಚು ಖಾತೆಗಳು ಬ್ಲಾಕ್‌ ಆಗಿರುವುದು ಬೆಳಕಿಗೆ ಬಂದಿದೆ. ಆಗಿನಿಂದ ಇನ್ನುಳಿದ ರೈತರು ನಿತ್ಯ ಬ್ಯಾಂಕಿಗೆ ಹೋಗಿ ತಮ್ಮ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ದಿನವೂ ಒಂದೆರಡು ಖಾತೆಗಳು ಬ್ಲಾಕ್‌ ಆಗುತ್ತಲೇ ಇವೆ.

ಸುತ್ತೋಲೆ ಕೈಗೆ ಬಂದಿಲ್ಲ:  ಈ ಬಗ್ಗೆ ರೈತರು ಬ್ಯಾಂಕ್‌ ಶಾಖಾ ವ್ಯವಸ್ಥಾಪಕ ನಿಖಿಲ್‌ ಎಂಬುವರನ್ನು ವಿಚಾರಿಸಿದ್ದಾರೆ. ‘ಕಟಬಾಕಿದಾರರು ಮತ್ತು ಅವರಿಗೆ ಜಾಮೀನು ನೀಡಿದವರ ಖಾತೆಗಳನ್ನು ನಿಷ್ಕಿ್ರಯ ಮಾಡಲು ಪ್ರಾದೇಶಿಕ ಕಚೇರಿಯಿಂದ ನಿರ್ದೇಶನ ಬಂದಿದೆ’ ಎಂದಿದ್ದಾರೆ. ಜಾಮೀನುದಾರರ ಖಾತೆಗಳನ್ನೇಕೆ ಬ್ಲಾಕ್‌ ಮಾಡುತ್ತೀರಿ ಎಂದಿದ್ದಕ್ಕೆ, ‘ಸಾಲಗಾರರಿಂದ ಸಕಾಲದಲ್ಲಿ ಮರುಪಾವತಿ ಮಾಡಿಸಿಲ್ಲ. ಈಗಲಾದರೂ ಸಾಲ ಮರುಪಾವತಿ ಮಾಡಿಸಿ ಇಂದೇ ನಿಮ್ಮ ಖಾತೆ ಮುಕ್ತ ಮಾಡುತ್ತೇವೆ’ ಎಂದಿದ್ದಾರೆ. ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದೆಯಲ್ಲಾ ಎಂದು ಪ್ರಶ್ನಿಸಿದರೆ, ‘ಸರ್ಕಾರ ಸಾಲ ಮನ್ನಾ ಮಾಡಿರುವ ಯಾವುದೇ ಅಧಿಕೃತ ಸುತ್ತೋಲೆ ನಮ್ಮ ಕೈಗೆ ಬಂದಿಲ್ಲ, ಬಂದಾಗ ನೋಡೋಣ’ ಎನ್ನುತ್ತಾರಂತೆ.

ಹೀಗೆ ಖಾತೆಗಳನ್ನೆಲ್ಲ ಬ್ಲಾಕ್‌ ಮಾಡುತ್ತಿರುವುದರಿಂದ ಆಕ್ರೋಶಗೊಂಡ ಖಾತೆದಾರ 30ಕ್ಕೂ ಹೆಚ್ಚು ರೈತರು ಬುಧವಾರ ಬ್ಯಾಂಕ್‌ಗೆ ಹೋಗಿ ಮ್ಯಾನೇಜರ್‌ ಸೇರಿದಂತೆ ಎಲ್ಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಿಷ್ಕಿ್ರಯಗೊಂಡಿರುವ ಎಲ್ಲರ ಖಾತೆಗಳನ್ನು ನಾಳೆಯೊಳಗಾಗಿ ಚಾಲ್ತಿ ಮಾಡಿದರೆ ಸರಿ, ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಸಮಸ್ಯೆ ಬಗೆಹರಿಸುತ್ತೇವೆ

ಪ್ರಾದೇಶಿಕ ಕಚೇರಿಯಿಂದ ನಾವು ಯಾವುದೇ ನಿರ್ದೇಶನ ನೀಡಿಲ್ಲ. ರೈತರ ಖಾತೆಗಳನ್ನು ಬ್ಲಾಕ್‌ ಮಾಡಲು ಬರುವುದಿಲ್ಲ. ಬಂಡಿವಾಡದಲ್ಲಿ ಏನು ಸಮಸ್ಯೆಯಾಗಿದೆಯೋ ಅದನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಕಿರುಕುಳ ಆಗದಂತೆ ನೋಡಿಕೊಳ್ಳುತ್ತೇವೆ. ಗುರುವಾರದೊಳಗೆ ಸಮಸ್ಯೆ ಬಗೆಹರಿಸುತ್ತೇವೆ.

-ಬ್ಯಾಪಿಸ್ಟ್‌ ಲೋಬೋ, ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ, ವಿಜಯಾ ಬ್ಯಾಂಕ್‌

ಬ್ಲಾಕ್‌ ಮಾಡಿರುವ ಬ್ಯಾಂಕ್‌ ಖಾತೆಗಳನ್ನು ಕೂಡಲೇ ಓಪನ್‌ ಮಾಡಬೇಕು. ರೈತರಿಗೆ ತೊಂದರೆ ಕೊಡಬಾರದು. ಈ ಕೆಲಸ ನಾಳೆಯೊಳಗೆ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಸರ್ಕಾರ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

-ಅಶೋಕ ಯಡವಣ್ಣವರ, ರೈತ ಹೋರಾಟಗಾರ

ನಾನು 5 ವರ್ಷದ ಹಿಂದೆಯೇ ಸಾಲ ಪಡೆದಿದ್ದೇನೆ. ಒಂದಿಷ್ಟುಅಸಲು ಹಾಗೂ ಬಡ್ಡಿ ತಪ್ಪದೇ ತುಂಬಿ ಪ್ರತಿವರ್ಷ ರಿನಿವಲ್‌ ಮಾಡಿಸಿಕೊಳ್ಳುತ್ತಾ ಬಂದಿದ್ದೇನೆ. ಈವರೆಗೂ ಸುಸ್ತಿದಾರನಾಗಿಲ್ಲ. ಆದರೆ ನಾನು ಜಾಮೀನು ನೀಡಿದ ರೈತರೊಬ್ಬರು ಸುಸ್ತಿದಾರರಾಗಿದ್ದಾರೆ ಎಂದು ನನ್ನ ಖಾತೆ ಬ್ಲಾಕ್‌ ಮಾಡಲಾಗಿದೆ. ಕೇಳಿದರೆ, ಸುಸ್ತಿದಾರರ ರೈತರಿಂದ ಸಾಲ ಮರುಪಾವತಿ ಮಾಡಿಸಿದರೆ ತಕ್ಷಣ ಓಪನ್‌ ಮಾಡುತ್ತೇವೆ ಎನ್ನುತ್ತಿದ್ದಾರೆ.

-ರುದ್ರಪ್ಪ ಇಡಗೂರು, ರೈತ

ಶಿವಾನಂದ ಗೊಂಬಿ