Asianet Suvarna News Asianet Suvarna News

ಸನಾತನ ಸಂಸ್ಥೆ ವಿರುದ್ಧ ಸಾಕ್ಷ್ಯ ಸಿಕ್ಕರೆ ಮಾತ್ರ ನಿಷೇಧ: ಪರಂ

 ಸನಾತನ ಸಂಸ್ಥೆ ಗೌರಿ ಲಂಕೇಶ್‌ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾದರೆ ಜತೆಗೆ ಸಾಕ್ಷ್ಯಗಳು ದೃಢಪಟ್ಟರೆ ಮಾತ್ರ ಸನಾತನ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಆಲೋಚನೆ ಮಾಡಬಹುದು ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

Ban Sanatan Sanstha Will Take Action Says  G Parameshwar
Author
Bengaluru, First Published Sep 1, 2018, 9:19 AM IST

ಬೆಂಗಳೂರು :  ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಲ್ಲಿ ಸನಾತನ ಸಂಸ್ಥೆ ಭಾಗಿಯಾಗಿರುವ ಬಗ್ಗೆ ಸಮರ್ಪಕವಾದ ಮಾಹಿತಿ ಲಭ್ಯವಾಗಿ ಸಾಕ್ಷ್ಯಗಳು ದೃಢಪಟ್ಟರೆ ಮಾತ್ರ ರಾಜ್ಯದಲ್ಲಿ ಆ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ನೇತೃತ್ವದಲ್ಲಿ ಗೌರಿ ಲಂಕೇಶ್‌ ಟ್ರಸ್ಟ್‌ ಸದಸ್ಯರನ್ನು ವಿಧಾನಸೌಧದಲ್ಲಿ ಶುಕ್ರವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸನಾತನ ಸಂಸ್ಥೆಯು ಗೌರಿ ಲಂಕೇಶ್‌ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಸೂಕ್ತ ಮಾಹಿತಿ ಲಭ್ಯವಾಗುವುದರ ಜತೆಗೆ ಸಾಕ್ಷ್ಯಗಳು ದೃಢಪಟ್ಟರೆ ಮಾತ್ರ ಸನಾತನ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಆಲೋಚನೆ ಮಾಡಬಹುದು ಎಂದು ಸ್ಪಷ್ಟಪಡಿಸಿದರು.

ಗೌರಿ ಲಂಕೇಶ್‌ ಟ್ರಸ್ಟ್‌ನ ಸದಸ್ಯರು ಭೇಟಿಯಾಗಿ ಪ್ರಕರಣದಲ್ಲಿ ತನಿಖೆ ಕೈಗೊಂಡಿರುವ ಪೊಲೀಸರ ಕಾರ್ಯದ ಮತ್ತು ಆರೋಪಿಗಳ ಬಂಧಿಸುವಲ್ಲಿ ಯಶ್ವಸಿಯಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಸನಾತನ ಸಂಸ್ಥೆ ಭಾಗಿಯಾಗಿರುವ ಕಾರಣ ಸಂಸ್ಥೆಯನ್ನು ನಿಷೇಧಿಸುವಂತೆ ಮನವಿ ಮಾಡಿದರು. ಆದರೆ, ಈ ಬಗ್ಗೆ ಸಮರ್ಪಕವಾದ ದಾಖಲೆಗಳು ಅಗತ್ಯ ಇದೆ. ಯಾವುದೇ ಸಾಕ್ಷ್ಯಗಳು ಇಲ್ಲದೆ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂಬುದರ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಜಿಗ್ನೇಶ್‌, ಪ್ರಕಾಶ್‌ ವಿರುದ್ಧದ ಕೇಸ್ ಹಿಂದೆಗೆತಕ್ಕೆ ಮನವಿ

ಗುಜರಾತ್‌ನ ಶಾಸಕ ಜಿಗ್ನೇಶ್‌ ಮೇವಾನಿ ಮತ್ತು ನಟ ಪ್ರಕಾಶ್‌ ರೈ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯುವಂತೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ನೇತೃತ್ವದಲ್ಲಿ ಗೌರಿ ಲಂಕೇಶ್‌ ಟ್ರಸ್ಟ್‌ ಸದಸ್ಯರು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿದರು. ವಿಧಾನಸಭಾ ಚುನಾವಣೆ ವೇಳೆ ಮತೀಯ ಸಂಘಗಳು ಜಯ ಗಳಿಸಬಾರದು ಎಂಬ ಶೀರ್ಷಿಕೆಯಲ್ಲಿ ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಗ್ನೇಶ್‌ ಮೇವಾನಿ ಮತ್ತು ಪ್ರಕಾಶ್‌ ರೈ ಭಾಗವಹಿಸಿದ್ದರು. ಆದರೆ, ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆಯಡಿಯಲ್ಲಿ ದೂರು ದಾಖಲಾಗಿವೆ. ಈ ಪ್ರಕರಣವು ಅನಗತ್ಯವಾಗಿದ್ದು, ವಾಪಸ್‌ ಪಡೆಯಬೇಕು ಎಂದು ಕೋರಲಾಯಿತು. ಈ ವೇಳೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌, ಪತ್ರಕರ್ತ ಅಮೀನ್‌ಮಟ್ಟು ಇತರರು ಉಪಸ್ಥಿತರಿದ್ದರು.

ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆ ಭಾಗಿಯಾಗಿದೆ ಎಂಬ ಮಾಹಿತಿ ಮೇರೆಗೆ ಮಹಾರಾಷ್ಟ್ರ ಸರ್ಕಾರವು ಸಂಸ್ಥೆಯನ್ನು ನಿಷೇಧ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಮಹಾರಾಷ್ಟ್ರ ಸರ್ಕಾರವು ಯಾವ ಆಧಾರದ ಮೇಲೆ ಪತ್ರ ಬರೆದಿದೆ ಎಂಬ ಮಾಹಿತಿ ಇಲ್ಲ. ರಾಜ್ಯ ಸರ್ಕಾರಕ್ಕೆ ಆ ಬಗ್ಗೆ ಖಚಿತ ಮಾಹಿತಿ ಬಂದಲ್ಲಿ ಮಾತ್ರ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದರು.

ಸೆ.5ರಂದು ಗೌರಿ ಲಂಕೇಶ್‌ ಹತ್ಯೆಯಾಗಿ ಒಂದು ವರ್ಷವಾಗುತ್ತಿರುವ ಕಾರಣ ಗೌರಿ ಲಂಕೇಶ್‌ ಚಿಂತನೆಯಲ್ಲಿ ನಂಬಿಕೆ ಇರುವವರು ಸಭೆಯೊಂದನ್ನು ನಡೆಸುತ್ತಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಸಭೆಗೆ ಅಗತ್ಯ ಪೊಲೀಸ್‌ ಭದ್ರತೆ ಒದಗಿಸುವ ಬಗ್ಗೆ ಭರವಸೆ ನೀಡಲಾಗಿದೆ ಎಂದು ನುಡಿದರು.

Follow Us:
Download App:
  • android
  • ios