ಕೆ.ಆರ್‌.ವೃತ್ತದಿಂದ ಹಡ್ಸನ್‌ ವೃತ್ತದವರೆಗೂ ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿ ನಡೆಸಲು 60 ದಿನಗಳ ಕಾಲ ಕಬ್ಬನ್‌ ಪಾರ್ಕ್ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಹೊಗೆ ಗಾಳಿಯನ್ನು ಸ್ವೀಕರಿಸಿ ಪಾರ್ಕ್ನಲ್ಲಿನ ಅನೇಕ ಪಕ್ಷಿಗಳು ಸಾವನ್ನಪ್ಪಿದವು. ಅಲ್ಲದೇ ಮಾಲಿನ್ಯ ಹೆಚ್ಚಾಗಿ 7,300 ಮರಗಳ ಮೇಲೆ ಕೆಟ್ಟಪರಿಣಾಮ ಬೀರಿತ್ತು. ಈಗ ನೃಪತುಂಗ ರಸ್ತೆಯಲ್ಲಿ ಮತ್ತೆ ಸಂಚಾರ ಆರಂಭವಾಗಿದ್ದು, ಕೆ.ಆರ್‌.ವೃತ್ತದಿಂದ ಪಾರ್ಕ್ ಮೂಲಕ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಚಿಂತನೆಯಿದೆ

ಬೆಂಗಳೂರು: ಗಿಡ, ಮರಗಳಿಗೆ ಆಗುವ ಹಾನಿ ತಪ್ಪಿಸಲು ಹಾಗೂ ಪ್ರಾಣಿಪಕ್ಷಿಗಳು ಸಹಜವಾಗಿ ಬದುಕುವ ವಾತಾವರಣ ಕಲ್ಪಿಸುವ ಸಲುವಾಗಿ ತೋಟಗಾರಿಕೆ ಇಲಾಖೆ ಕಬ್ಬನ್‌ ಪಾರ್ಕ್ನ 4 ದ್ವಾರಗಳಲ್ಲಿ ಸಂಚಾರ ಸ್ಥಗಿತಗೊಳಿಸುವ ಚಿಂತನೆ ನಡೆಸಿದೆ. ಈ ಸಂಬಂಧ ಈಗಾಗಲೇ ಪ್ರಸ್ತಾವನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಸರ್ಕಾರದಿಂದ ಪ್ರಸ್ತಾವನೆಗೆ ಹಸಿರು ನಿಶಾನೆ ಸಿಕ್ಕಲ್ಲಿ ಶೀಘ್ರದಲ್ಲಿ 4 ದ್ವಾರಗಳಲ್ಲಿ ವಾಹನ ಸಂಚಾರ ಕೊನೆಗೊಳ್ಳಲಿದೆ. ಈಗಾಗಲೇ ಪ್ರತಿ ಭಾನುವಾರ ಹಾಗೂ 2ನೇ ಶನಿವಾರಗಳಂದು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಾರ್ಕ್ನಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ತುಂಬಾ ಜಾಸ್ತಿಯಾಗಿದೆ. ವಾಹನಗಳು ಉಗುಳುವ ಹೊಗೆಯಿಂದ ಒಂದು ಕಡೆ ಪರಿಸರಕ್ಕೆ ಹಾನಿಯಾದರೆ, ಮತ್ತೊಂದು ಕಡೆ ಶಬ್ಧ ಮಾಲಿನ್ಯದಿಂದ ಸಣ್ಣ ಪುಟ್ಟಪ್ರಾಣಿ, ಪಕ್ಷಿಗಳ ಸಹಜ ಬದುಕಿಗೆ ತೊಂದರೆಯಾಗುತ್ತಿದೆ ಎಂದು ಪರಿಸರ ಪ್ರೇಮಿಗಳಿಂದ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಈಗಿರುವ 8 ದ್ವಾರಗಳ ಪೈಕಿ 4 ದ್ವಾರಗಳನ್ನು ಮುಚ್ಚಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಕಬ್ಬನ್‌ ಪಾರ್ಕ್ನ ಉಪ ನಿರ್ದೇಶಕ ಮಹಾಂತೇಶ್‌ ಮುರಗೋಡು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸುವ ನಿರೀಕ್ಷೆಯಿದೆ. ಒಪ್ಪಿಗೆ ದೊರೆತ ತಕ್ಷಣ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು. ವಾಹನ ಸಂಚಾರ ಸ್ಥಗಿತದ ಬಳಿಕ ಪಾದಚಾರಿಗಳಿಗೆ ಅನುಕೂಲವಾಗುವಂತೆ ಈ ಮಾರ್ಗಗಳಲ್ಲಿ ನಡಿಗೆದಾರ ಪಥ ನಿರ್ಮಿಸಲು ಚಿಂತನೆಯಿದೆ ಎಂದರು.

ಕೆ.ಆರ್‌.ವೃತ್ತದಿಂದ ಹಡ್ಸನ್‌ ವೃತ್ತದವರೆಗೂ ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿ ನಡೆಸಲು 60 ದಿನಗಳ ಕಾಲ ಕಬ್ಬನ್‌ ಪಾರ್ಕ್ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಹೊಗೆ ಗಾಳಿಯನ್ನು ಸ್ವೀಕರಿಸಿ ಪಾರ್ಕ್ನಲ್ಲಿನ ಅನೇಕ ಪಕ್ಷಿಗಳು ಸಾವನ್ನಪ್ಪಿದವು. ಅಲ್ಲದೇ ಮಾಲಿನ್ಯ ಹೆಚ್ಚಾಗಿ 7,300 ಮರಗಳ ಮೇಲೆ ಕೆಟ್ಟಪರಿಣಾಮ ಬೀರಿತ್ತು. ಈಗ ನೃಪತುಂಗ ರಸ್ತೆಯಲ್ಲಿ ಮತ್ತೆ ಸಂಚಾರ ಆರಂಭವಾಗಿದ್ದು, ಕೆ.ಆರ್‌.ವೃತ್ತದಿಂದ ಪಾರ್ಕ್ ಮೂಲಕ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಚಿಂತನೆಯಿದೆ ಎಂದರು.

ಹೈಕೋರ್ಟ್‌'ನಿಂದ ಯುಬಿ ಸಿಟಿ ಸಂಪರ್ಕಿಸುವ ಮಾರ್ಗದಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ಈ ಮಾರ್ಗ ಮುಚ್ಚಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ತಕ್ಷಣಕ್ಕೆ ಕಷ್ಟವಾಗಲಿದೆ. ಇದರಿಂದ ಹೊರಭಾಗದಲ್ಲಿ ಟ್ರಾಫಿಕ್‌ ಹೆಚ್ಚಾಗುವುದರಿಂದ ಸದ್ಯಕ್ಕೆ ಈ ಮಾರ್ಗಗಳನ್ನು ಮುಚ್ಚುತ್ತಿಲ್ಲ ಎದು ಹೇಳಿದರು. ಹೈಕೋರ್ಟ್‌, ಎನ್‌ಜಿಒ ಹಾಗೂ ಯುಬಿ ಸಿಟಿ ಬಳಿಯ ಮಾರ್ಗಯನ್ನು ಮಾತ್ರ ಸಂಚಾರಕ್ಕೆ ಮುಕ್ತವಾಗಿರಿಸಲಾಗುವುದು. ಆದರೆ, ಹಡ್ಸನ್‌ ವೃತ್ತ, ಸೆಂಚುರಿ ಕ್ಲಬ್‌ ದ್ವಾರ, ಬಾಲ ಭವನ ಹಾಗೂ ಪ್ರೆಸ್‌ಕ್ಲಬ್‌ ಮುಂದಿನ ಮಾರ್ಗವನ್ನು ಸ್ಥಗಿತಗೊಳಿಸಲಾಗುವುದು ಎಂದರು.

ಹಡ್ಸನ್‌ ವೃತ್ತ ಸೇರಿ ಇತರೆಡೆ ಗುರುತಿಸಿರುವ ಮಾರ್ಗಗಳನ್ನು ಶಾಶ್ವತವಾಗಿ ಮುಚ್ಚಲು ತಿರ್ಮಾನಿಸಲಾಗಿದೆ. ಹಡ್ಸನ್‌ ವೃತ್ತ ಹಾಗೂ ಕೆ.ಆರ್‌. ವೃತ್ತದಿಂದಲೂ ನಿತ್ಯ ಸಾವಿರಾರು ವಾಹನಗಳು ಪ್ರವೇಶಿಸುತ್ತವೆ. ಈ ಗೇಟ್‌'ಗಳನ್ನು ಮುಚ್ಚುವುದು ಕಬ್ಬನ್‌'ಪಾರ್ಕ್'ನ ಪಾಲಿಗೆ ಮಹತ್ವದ ತಿರ್ಮಾನವಾಗಿದೆ ಎಂದು ಕಬ್ಬನ್‌'ಪಾರ್ಕ್ ನಡಿಗೆದಾರರ ಸಂಘದ ಆಧ್ಯಕ್ಷ ಉಮೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in