ಜಿನೆವಾ(ಸೆ.20): ಗಡಿಪಾರಾಗಿರುವ ಬಲೂಚ್ ನಾಯಕ ಬ್ರಹಾಂದಾಘ್ ಬುಗ್ತಿ ಈ ವಾರ ಭಾರತದಲ್ಲಿ ರಾಜಕೀಯ ಆಶ್ರಯ ಪಡೆಯಲು ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧ ಬಲೂಚಿಸ್ತಾನ ಚಳವಳಿ ನಡೆಸುತ್ತಿರುವ ಬುಗ್ತಿಯವರನ್ನು ಇನ್ನಷ್ಟು ಬಲೂಚ್ ನಾಯಕರು ಹಿಂಬಾಲಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ‘‘ನಾವು ಭಾರತದಲ್ಲಿ ಆಶ್ರಯ ಪಡೆಯಲು ಅಲ್ಲಿನ ಸರ್ಕಾರಕ್ಕೆ ಅಧಿಕೃತವಾಗಿ ನಾವು ನಿರ್ಧರಿಸಿದ್ದೇವೆ. ಅರ್ಜಿ ಸಲ್ಲಿಸುವ ಕಾನೂನು ಪ್ರಕ್ರಿಯೆ ಪಾಲಿಸಲಿದ್ದೇವೆ’’ ಎಂದು ಬುಗ್ತಿ ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ಹಾಗೂ ಹಾಲಿ ಸೇನಾ ಮುಖ್ಯಸ್ಥರ ವಿರುದ್ಧ ತಾನು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಬಲೂಚ್ ರಿಪಬ್ಲಿಕನ್ ಪಾರ್ಟಿ (ಬಿಆರ್‌ಪಿ)ಯ ನಾಯಕ ಬುಗ್ತಿ ಹೇಳಿದ್ದಾರೆ. ಚೀನಾದ ಮೇಲೂ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಭಾರತ, ಬಾಂಗ್ಲಾದೇಶ್, ಅಫ್ಘಾನಿಸ್ತಾನದ ನೆರವು ಕೋರಲು ತಮ್ಮ ಪಕ್ಷ ನಿರ್ಧರಿಸಿದೆ. ಬಲೂಚ್ ಜನರ ಮೇಲೆ ಹಿಂಸೆ ಎಸಗಲು ಪಾಕಿಸ್ತಾನದೊಂದಿಗೆ ಚೀನಾ ಕೂಡ ಭಾಗಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
