ಶೇಖ್ ಸಾಬ್ (ಗಣಿ ಗುತ್ತಿಗೆ ಸಂಖ್ಯೆ2572) ಎಂಬುವರು ಹೊಂದಿರುವ ಗಣಿ ಪ್ರದೇಶದಿಂದ 54,120 ಮೆಟ್ರಿಕ್ ಟನ್ ಕಬ್ಬಿಣ ಅದಿರು ಕಾಣೆಯಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 13,53,00,000 ರೂ.ನಷ್ಟ ಉಂಟಾಗಿದೆ ಎಂದು ಲೋಕಾಯುಕ್ತ ವರದಿಯ ಅಧ್ಯಾಯ 11ರಲ್ಲಿ ವಿಸ್ತೃತವಾಗಿ ಪ್ರಸ್ತಾಪಿಸಲಾಗಿತ್ತು. ನಷ್ಟ ವಸೂಲಿ ಮಾಡುವ ಸಲುವಾಗಿ 2 ವರ್ಷದ ಹಿಂದೆಯೇ ಅಂದರೆ 2015ರ ಜೂನ್ 5ರಂದು ರಿಕವರಿ ಪ್ರಮಾಣ ಪತ್ರ ಜಾರಿ ಮಾಡಲಾಗಿತ್ತು. ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿಗೂ 2016ರ ಆಗಸ್ಟ್ 19ರಂದು ಪತ್ರ ಬರೆದು ನಿರ್ದೇಶಿಸಲಾಗಿತ್ತು.ಆದರೆ, ಶೇಖ್ಸಾಬ್ ಎಂಬ ಗಣಿ ಗುತ್ತಿಗೆದಾರನ ಬಳಿ ಯಾವ ಆಸ್ತಿಯೂ ಇಲ್ಲ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಸಂಪುಟ ಉಪ ಸಮಿತಿಗೆ ವರದಿ ನೀಡಿದ್ದಾರೆ.
ಬೆಂಗಳೂರು(ಏ.21): ಗಣಿ ಗುತ್ತಿಗೆದಾರರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ ವಸೂಲಾತಿಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿಲ್ಲ.
ನಷ್ಟ ವಸೂಲು ಮಾಡಲು ಸರ್ಕಾರ ಹೊರಡಿಸಿರುವ ರಿಕವರಿ ಪ್ರಮಾಣ ಪತ್ರವನ್ನು ಪ್ರಶ್ನಿಸಿ ಹಲವು ಗಣಿ ಗುತ್ತಿಗೆದಾರರು ಉಚ್ಛ ನ್ಯಾಯಾಲಯದಲ್ಲಿ ಹೂಡಿರುವ ದಾವೆಗೆ ಪ್ರತಿಯಾಗಿ ಅಧಿಕಾರಿಗಳು ಸಮರ್ಥವಾಗಿ ದಾಖಲೆ ಒದಗಿಸುತ್ತಿಲ್ಲ. ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತಡೆಯನ್ನು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ.
ಹಾಗೆಯೇ, ನೂರಾರು ಕೋಟಿ ರೂಪಾಯಿ ಗಳಿಸಿರುವ ಕೆಲ ಗಣಿ ಗುತ್ತಿಗೆದಾರ ಬಳಿ ಆಸ್ತಿಯೇ ಇಲ್ಲದಿರುವ ಅಂಶವೂ ಈಗ ಹೊರಬಿದ್ದಿದೆ. ಎಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿರುವ ಸಚಿವ ಸಂಪುಟ ಉಪ ಸಮಿತಿ ಕಳೆದ ಮಾರ್ಚ್ನಲ್ಲಿ ನಡೆಸಿರುವ ಸಭೆಯಲ್ಲಿ ಇಂತಹ ಹಲವು ಮಾಹಿತಿಗಳು ಬಹಿರಂಗವಾಗಿದೆ.
ಶೇಖ್ ಸಾಬ್ (ಗಣಿ ಗುತ್ತಿಗೆ ಸಂಖ್ಯೆ2572) ಎಂಬುವರು ಹೊಂದಿರುವ ಗಣಿ ಪ್ರದೇಶದಿಂದ 54,120 ಮೆಟ್ರಿಕ್ ಟನ್ ಕಬ್ಬಿಣ ಅದಿರು ಕಾಣೆಯಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 13,53,00,000 ರೂ.ನಷ್ಟ ಉಂಟಾಗಿದೆ ಎಂದು ಲೋಕಾಯುಕ್ತ ವರದಿಯ ಅಧ್ಯಾಯ 11ರಲ್ಲಿ ವಿಸ್ತೃತವಾಗಿ ಪ್ರಸ್ತಾಪಿಸಲಾಗಿತ್ತು. ನಷ್ಟ ವಸೂಲಿ ಮಾಡುವ ಸಲುವಾಗಿ 2 ವರ್ಷದ ಹಿಂದೆಯೇ ಅಂದರೆ 2015ರ ಜೂನ್ 5ರಂದು ರಿಕವರಿ ಪ್ರಮಾಣ ಪತ್ರ ಜಾರಿ ಮಾಡಲಾಗಿತ್ತು. ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿಗೂ 2016ರ ಆಗಸ್ಟ್ 19ರಂದು ಪತ್ರ ಬರೆದು ನಿರ್ದೇಶಿಸಲಾಗಿತ್ತು.
ಆದರೆ, ಶೇಖ್ಸಾಬ್ ಎಂಬ ಗಣಿ ಗುತ್ತಿಗೆದಾರನ ಬಳಿ ಯಾವ ಆಸ್ತಿಯೂ ಇಲ್ಲ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಸಂಪುಟ ಉಪ ಸಮಿತಿಗೆ ವರದಿ ನೀಡಿದ್ದಾರೆ.

ವಸೂಲಾಗುತ್ತಾ 12,228 ಕೋಟಿ ?
ಅಕ್ರಮ ಗಣಿಗಾರಿಕೆಯಿಂದಾಗಿ 12,228 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿತ್ತು ಎಂದು ಲೋಕಾಯುಕ್ತ ವರದಿ 2ರಲ್ಲಿ ಉಲ್ಲೇಖಿಸಲಾಗಿತ್ತು. ಗಣಿ ಗುತ್ತಿಗೆದಾರರಿಂದ ಸರ್ಕಾರಕ್ಕೆ ಸಂದಾಯ ಆಗಬೇಕಿರುವ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡಲು ರಿಕವರಿ ಪ್ರಮಾಣ ಪತ್ರ ಹೊರಡಿಸಲಾಗಿತ್ತು. ಇದರಲ್ಲಿ 300 ಕೋಟಿ ರೂಪಾಯಿ ವಸೂಲು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ 6 ವರ್ಷ ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ವಸೂಲಾಗಿಲ್ಲ. ಇನ್ನು, ಓವರ್ ಲೋಡಿಂಗ್ಗೆ ಸಂಬಂಧಿಸಿದಂತೆ ಸುಮಾರು 6 ಪ್ರಕರಣಗಳಿದ್ದು, ಇವರಿಂದ 138 ಕೋಟಿ ರೂಪಾಯಿ ವಸೂಲು ಮಾಡುವ ಪ್ರಕ್ರಿಯೆಯೂ ಆರಂಭವಾಗಿಲ್ಲ.
ಗಣಿ ಗುತ್ತಿಗೆದಾರರು, ನಷ್ಟಕ್ಕೆ ಕಾರಣಕರ್ತರಾದ ಸರ್ಕಾರಿ ಅಧಿಕಾರಿ, ನೌಕರರು, ಗಣಿ ಗುತ್ತಿಗೆದಾರರೇತರು ಅಂದರೆ ಅದಿರು ರಫ್ತುದಾರರು, ಸಾಗಾಣಿಕೆದಾರರು, ದಾಸ್ತಾನುದಾರರು,ಅದಿರು ವ್ಯಾಪಾರಿಗಳು, ನೋಂದಣಿಯಾಗದ ವ್ಯವಹಾರಸ್ಥರಿಂದ ನಷ್ಟ ವಸೂಲು ಮಾಡುವ ಪ್ರಕ್ರಿಯೆಯೂ ಇನ್ನೂ ಬಿರುಸುಗೊಂಡಿಲ್ಲ ಎಂದು ತಿಳಿದು ಬಂದಿದೆ.
ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ 10ಕ್ಕಿಂತ ಹೆಚ್ಚು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದರೂ ಅದರ ಅಧಾರದ ಮೇಲೆ ನಷ್ಟ ವಸೂಲು ಮಾಡುವ ಕೆಲಸವೂ ವಿಳಂಬವಾಗಿದೆ.
ವರದಿ: ಜಿ.ಮಹಾಂತೇಶ್, ಸುವರ್ಣ ನ್ಯೂಸ್
