ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್’ನಲ್ಲಿ ಕಳಪೆ ಆಹಾರ ಪೂರೈಕೆ ಮಾಡಿ ಸಾರ್ವಜನಿಕರಿಂದ ಮುಜುಗರಕ್ಕೀಡಾಗಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು(ಸೆ.04): ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್’ನಲ್ಲಿ ಕಳಪೆ ಆಹಾರ ಪೂರೈಕೆ ಮಾಡಿ ಸಾರ್ವಜನಿಕರಿಂದ ಮುಜುಗರಕ್ಕೀಡಾಗಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಯಲಹಂಕ ಹಾಗೂ ನಾರಾಯಣಪುರ ವ್ಯಾಪ್ತಿಯ ಎರಡು ಇಂದಿರಾ ಕ್ಯಾಂಟೀನ್'ಗಳಲ್ಲಿ ಕಳೆದ ಶುಕ್ರವಾರ ಹಳಸಿದ ಆಹಾರ ವಿತರಿಸಲಾಗಿದೆ. ಆಹಾರ ಸೇವಿಸಿದ ನಾಗರಿಕರು ಕ್ಯಾಂಟೀನ್ ಉಸ್ತುವಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಬಳಿಕ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಿಬಿಎಂಪಿ ವಲಯ ಆರೋಗ್ಯ ಅಧಿಕಾರಿಗಳು ಹಳಸಿದ ವಾಸನೆ ಬರುತ್ತಿದ್ದ ಆಹಾರವನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಪ್ರಕಾರ ಈ ಎರಡೂ ಕ್ಯಾಂಟೀನ್'ಗಳಿಗೆ ಅರಮನೆ ಮೈದಾನದಲ್ಲಿ ವೈಟ್ ಪೆಟಲ್'ನಲ್ಲಿರುವ ತಾತ್ಕಾಲಿಕ ಅಡುಗೆ ಮನೆಯಿಂದ ತಯಾರಾಗಿ ಬಂದಿದ್ದ ಆಹಾರ ಇದಾಗಿದೆ. ಬೆಳಗ್ಗೆ ತಿಂಡಿಗೆ ರಾತ್ರಿ ಅನ್ನವನ್ನು ಬಿಸಿ ಮಾಡಿ ನೀಡಲಾಗಿದೆ. ಆ ಬಿಸಿ ಮಾಡಿದ ಅನ್ನ ಕ್ಯಾಂಟೀನ್'ಗೆ ತರುವಷ್ಟರಲ್ಲಿ ಹಳಸಿದ ವಾಸನೆ ಬಂದಿದೆ. ಇದರಿಂದ ಈ ಆಹಾರ ಸೇವಿಸಿದ ನಾಗರಿಕರು ಕ್ಯಾಂಟೀನ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಮೇಯರ್ ಜಿ.ಪದ್ಮಾವತಿ, ಯಲಹಂಕ ಮತ್ತು ನಾರಾಯಣಪುರದಲ್ಲಿ ಕೆಲ ದಿನಗಳ ಹಿಂದೆ ಒಂದು ದಿನ ಮಾತ್ರ ಕಳಪೆ ಗುಣಮಟ್ಟದ ಆಹಾರ ನೀಡಿರುವ ಬಗ್ಗೆ ಮಾಹಿತಿ ಬಂದಿದೆ. ಕ್ಯಾಂಟೀನ್'ಗೆ ಪೂರೈಸಲ್ಪಟ್ಟ ಆಹಾರವನ್ನು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಮೊದಲ ದಿನ ಯಾವುದೇ ಸಮಸ್ಯೆ ಆಹಾರದಲ್ಲಿ ಕಂಡುಬಂದಿರಲಿಲ್ಲ. ಮರು ದಿನ ಮತ್ತೆ ತಪಾಸಣೆಗೆ ಹೋದ ವೇಳೆ ಮೇಲ್ಬಾಗದಲ್ಲಿ ಉತ್ತಮ ಗುಣಮಟ್ಟದ ಆಹಾರ ಇದ್ದು, ತಳಭಾಗದಲ್ಲಿ ಹಳಸಿದ ಅನ್ನ ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಯೋಗಾಲಯದಲ್ಲಿ ಆಹಾರ ಪರಿಶೀಲಿಸಿದ ಬಳಿಕವೇ ವಾಸ್ತವ ತಿಳಿಯಲಿದೆ ಎಂದು ಹೇಳಿದರು.
