ಎಡಪಂಥೀಯ ಚಿಂತಕಿ, ವಿವಾದಾತ್ಮಕ ಲೇಖಕಿಯಾಗಿದ್ದ  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಶಂಕೆಯ ಸುಳಿಗಳು ವ್ಯಾಪಕವಾಗ್ತಿದೆ. ಇನ್ನು ಬಾಬಾಬುಡನ್'ಗಿರಿ ವಿವಾದದ ಹೋರಾಟವೇ ಗೌರಿ ಲಂಕೇಶ್ ಹತ್ಯೆಗೆ ಕಾರಣಾನಾ ಎಂಬ ಶಂಕೆ ಹಬ್ಬಿದೆ?

ಬೆಂಗಳೂರು(ಸೆ. 07): ಗೌರಿ ಲಂಕೇಶ್ ಅವರ ಸೈದ್ದಾಂತಿಕ ನಿಲುವುಗಳಲ್ಲಿನ ಭಿನ್ನಾಭಿಪ್ರಾಯವೇ ಹತ್ಯೆಗೆ ಕಾರಣ ಅನ್ನೋ ವಾದ ವ್ಯಾಪಕ ಚರ್ಚೆಯಾಗುತ್ತಿದೆ. ಇದರ ಮಧ್ಯೆ ಬಾಬಾಬುಡನ್'ಗಿರಿ ವಿವಾದಕ್ಕೂ ಗೌರಿ ಲಂಕೇಶ್‌ ಹತ್ಯೆಗೂ ನಂಟಿದೆ ಎಂಬ ಮಾತುಗಳು ಹರಿದಾಡ್ತಿದೆ.

ಕಾಫಿಯ ನಾಡು ಚಿಕ್ಕಮಗಳೂರಿಗೂ ಪತ್ರಕರ್ತೆ ಗೌರಿಲಂಕೇಶ್‌'ಗೂ ಅನಿನಾಭಾವ ನಂಟಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಚಳವಳಿ, ತುಂಗಾ-ಭದ್ರಾ ನದಿ ಉಳಿಸಿ ಆಂದೋಲನ, ಜಿಲ್ಲೆಯ ವಿವಾದದ ಕೇಂದ್ರ ಬಾಬಾಬುಡನ್'ಗಿರಿ ಹೋರಾಟಗಳಲ್ಲಿ ಮುಂಚೂಣಿ ಪಾತ್ರ ವಹಿಸಿದ್ದವರು ಗೌರಿ ಲಂಕೇಶ್. ಸಾಕಷ್ಟು ವಿರೋಧ, ಪ್ರತಿರೋಧ, ಬೆದರಿಕೆಗಳ ವಿರುದ್ಧ ನಿಂತು ಇನಾಂ ದತ್ತಾತ್ರೇಯ ಬಾಬಾಬುಡನ್'ದರ್ಗಾದ ಹೋರಾಟಗಳಲ್ಲಿ ಗೌರಿ ಲಂಕೇಶ್ ಭಾಗವಹಿಸಿದ್ರು.

ಇನ್ನು ಕಾಡಿನಲ್ಲಿದ್ದು, ಭೂಗತರಾಗಿದ್ದ ಹಲವು ನಕ್ಸಲರನ್ನು ಮುಖ್ಯವಾಹಿನಿಗೆ ಕರೆ ತರುವುದರಲ್ಲೂ ಪ್ರಮುಖ ಪಾತ್ರವಹಿಸಿದ್ರು ಗೌರಿ ಲಂಕೇಶ್.

ಸದ್ಯ, ದತ್ತಪೀಠದ ವಿವಾದ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲೇ ತೀರ್ಮಾನ ತೆಗೆದುಕೊಳ್ಳಲು ನ್ಯಾಯಾಲಯ ಸೂಚನೆ ನೀಡಿತ್ತು. ಸರ್ಕಾರವೂ ಒಂದು ಸಮಿತಿಯನ್ನು ರಚನೆ ಮಾಡಿದೆ. ಇದರ ನಡುವೆ ಗೌರಿ ಹತ್ಯೆಗೆ. ಈ ಹಿಂದಿನ ದತ್ತಪೀಠ ವಿವಾದದ ಕರಿನೆರಳು ಇದೆ ಎನ್ನುವ ಶಂಕೆಯೂ ಜಿಲ್ಲಾದ್ಯಾಂತ ಹರಿದಾಡ್ತಿದೆ.

- ಕಿರಣ್, ಸುವರ್ಣ ನ್ಯೂಸ್, ಚಿಕ್ಕಮಗಳೂರು