ಬೆಂಗಳೂರು :  ‘ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಯಾವ ಶಾಸಕರನ್ನೂ ನಾವು ಸಂಪರ್ಕ ಮಾಡಿಲ್ಲ’ ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ. ನಾವೇನಾದರೂ ಕಾಂಗ್ರೆಸ್‌ ಶಾಸಕರನ್ನು ನಮ್ಮ ಪಕ್ಷಕ್ಕೆ ಸೆಳೆದ ಬಗ್ಗೆ ದಾಖಲೆಗಳಿದ್ದರೆ ಕೊಡಿ ಎಂದೂ ಅವರು ಸವಾಲು ಹಾಕಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಿಲ್ಲ. ಕಾಂಗ್ರೆಸ್‌ ನಾಯಕರೇ ಗುಂಪು ಮಾಡಿಕೊಂಡು ಕಚ್ಚಾಡುತ್ತಿದ್ದಾರೆ ಎಂದು ಹೇಳಿದರು.

ಅಧಿಕಾರಿಗಳ ವರ್ಗಾವಣೆ ದಂಧೆ ಮತ್ತಿತರೆ ಕಾರಣಗಳಿಗಾಗಿ ಅವರಲ್ಲಿ ಕಚ್ಚಾಟ ಆರಂಭವಾಗಿದೆ. ಅವರು ಎಲ್ಲಿಗಾದರೂ ಹೋಗಲಿ. ಆ ಬಗ್ಗೆ ನಾವು ತಲೆಕಡಿಸಿಕೊಳ್ಳುವುದಿಲ್ಲ, ಕಾಂಗ್ರೆಸ್‌ ಶಾಸಕರು ದೆಹಲಿಗೆ ಹೋದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಅವರಾಗಿಯೇ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅದನ್ನು ಬಿಜೆಪಿಯ ಮೇಲೆ ಹೊರಿಸುತ್ತಿದ್ದಾರೆ. ನಾವು ಇದನ್ನು ದೂರದಿಂದ ನೋಡುತ್ತಿದ್ದೇವೆ ಅಷ್ಟೇ. ನಾವು ಸರ್ಕಾರ ಉರುಳಿಸಿ ನಮ್ಮ ಸರ್ಕಾರ ರಚಿಸಲು ಹೋಗುವುದಿಲ್ಲ. ಸರ್ಕಾರ ತಾನಾಗಿಯೇ ಬಿದ್ದರೆ ಸುಮ್ಮನಿರುವುದಿಲ್ಲ ಎಂದರು.