ಭೂ ಮಾಫಿಯಾಗಾರರ ಪಟ್ಟಿಯಲ್ಲಿ ರಾಂಪುರ ಸಂಸದ ಆಜಂಖಾನ್?| ಆಜಂ ಖಾನ್ ಹೆಸರು ಸೇರಿಸಲು ರಾಂಪುರ ಜಿಲ್ಲಾಡಳಿತ
ಲಖನೌ[ಜು.15]: ಭೂ ಕಬಳಿಕೆಗೆ ಕುಖ್ಯಾತಿ ಹೊಂದಿರುವ ಉತ್ತರಪ್ರದೇಶದ ರಾಂಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಹೆಸರು, ಶೀಘ್ರವೇ ಭೂ ಮಾಫಿಯಾಗಾರರ ಪಟ್ಟಿಸೇರುವ ಸಾಧ್ಯತೆ ಇದೆ.
ಯುಪಿ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಬಳಿಕ, ಭೂ ಮಾಫಿಯಾ ಕುರಿತು ಜನತೆ ದೂರು ಸಲ್ಲಿಸಲು ಅನುವಾಗುವಂತೆ ಜಿಲ್ಲಾ ಮಟ್ಟದಲ್ಲಿ ಭೂ ಮಾಫಿಯಾ ನಡೆಸುವವರ ಪಟ್ಟಿಬಿಡುಗಡೆ ಮಾಡಲು ನಿರ್ಧರಿಸಿದ್ದರು. ಇದೀಗ ಆ ಪಟ್ಟಿಯಲ್ಲಿ ಆಜಂ ಖಾನ್ ಹೆಸರು ಸೇರಿಸಲು ರಾಂಪುರ ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಪೊಲೀಸರ ವರದಿ ಪ್ರಕಾರ ಆಜಂಖಾನ್ ಮೇಲೆ ಭೂ ಮಾಫಿಯಾದ 30 ಪ್ರಕರಣ ಇವೆ. ಸರ್ಕಾರಿ ಇಲ್ಲವೇ ರೈತರ ಜಮೀನುಗಳನ್ನು ಒತ್ತಾಯಪೂರ್ವಕವಾಗಿ, ಇಲ್ಲವೇ ಬೆದರಿಸಿ, ಇಲ್ಲವೇ ಖೊಟ್ಟಿದಾಖಲೆಗಳನ್ನು ಸೃಷ್ಠಿಸುವ ಮೂಲಕ ತಮ್ಮ ಹೆಸರಿಗೆ ಬರೆದುಕೊಂಡ ಆರೋಪ ಇವೆ.
2012-17ರಲ್ಲಿ ಉತ್ತರಪ್ರದೇಶದ ಕ್ಯಾಬಿನೆಟ್ ಸಚಿವರಾಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡು 26 ಬಡ ರೈತರಿಂದ ಸುಮಾರು 5000 ಹೆಕ್ಟೇರ್ ಭೂಮಿ ವಶಕ್ಕೆ ಪಡೆದುಕೊಂಡಿದ್ದು ಅಲ್ಲಿ ಬಹುಕೋಟಿ ಮೌಲ್ಯದ ಮೊಹಮ್ಮದ್ ಅಲಿ ಜೌಹಾರ್ ವಿವಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ಆ ರೈತರು ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ.
