ನವದೆಹಲಿ[ಆ.08]: ಅಯೋಧ್ಯೆಯೇ ಶ್ರೀರಾಮನ ಜನ್ಮಸ್ಥಳ ಎಂಬುದಕ್ಕೆ ಭಕ್ತರ ದೃಢವಾದ ನಂಬಿಕೆಯೇ ಸಾಕ್ಷ್ಯ ಎಂದು ರಾಮಜನ್ಮಭೂಮಿ ವಿವಾದದಲ್ಲಿ ‘ರಾಮ ಲಲ್ಲಾ’ ಪರ ವಕೀಲರಾಗಿರುವ ಹಿರಿಯ ನ್ಯಾಯವಾದಿ ಕೆ. ಪರಾಶರನ್‌ ಅವರು ವಾದ ಮಂಡಿಸಿದ್ದಾರೆ.

ರಾಮಜನ್ಮಭೂಮಿಯೇ ದೇವರ ಮೂರ್ತರೂಪವಾಗಿಬಿಟ್ಟಿದೆ. ಅಲ್ಲದೆ ಹಿಂದುಗಳ ಆರಾಧಾನ ಸ್ಥಳವಾಗಿದೆ. ಶ್ರೀರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದ ಎಂಬುದನ್ನು ವಾಲ್ಮೀಕಿ ರಾಮಾಯಣದಲ್ಲಿ ಮೂರು ಕಡೆ ಪ್ರಸ್ತಾಪಿಸಲಾಗಿದೆ ಎಂದು ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠಕ್ಕೆ ಬುಧವಾರ ತಿಳಿಸಿದರು. ಅಲ್ಲದೆ, ಹಲವಾರು ಶತಮಾನಗಳು ಉರುಳಿದ ಬಳಿಕ ಶ್ರೀರಾಮ ಇಲ್ಲೇ ಹುಟ್ಟಿದ್ದ ಎಂಬುದನ್ನು ನಾವು ಸಾಬೀತುಪಡಿಸುವುದಾದರೂ ಹೇಗೆ? ಎಂದೂ ಕೇಳಿದರು.

ಈ ವೇಳೆ ಇದೇ ರಾಮನ ಜನ್ಮಭೂಮಿ ಎಂದು ಸಾಬೀತಿಗೆ ಮತ್ತು ಈ ಜಾಗದ ಮೇಲಿನ ನಿಮ್ಮ ಹಕ್ಕು ಸಾಬೀತುಪಡಿಸಲು ಯಾವುದಾದರೂ ದಾಖಲೆ ಇದೆಯೇ ಎಂದು ನಿರ್ಮೋಹಿ ಅಖಾಡದ ಪರ ವಕೀಲರಿಗೆ ನ್ಯಾಯಪೀಠ ಕೇಳಿತು. ಅದಕ್ಕೆ ಈ ಹಿಂದೆ ನಮ್ಮ ಬಳಿ ಸಾಕಷ್ಟುಬಳಿ ದಾಖಲೆಗಳು ಇದ್ದವು. ಆದರೆ 1982ರಲ್ಲಿ ನಡೆದ ಕಳ್ಳತನದ ವೇಳೆ ಎಲ್ಲಾ ದಾಖಲೆಗಳು ಕಳೆದು ಹೋದವು ಎಂದು ನಿರ್ಮೋಹಿ ಅಖಾಡ ಪರ ವಕೀಲರು ಸ್ಪಷ್ಟನೆ ನೀಡಿದರು.

ಈ ವಾದ ಆಲಿಸಿದ ನ್ಯಾಯಪೀಠ, ಒಬ್ಬ ಧಾರ್ಮಿಕ ವ್ಯಕ್ತಿಯ ಜನನಕ್ಕೆ ಸಂಬಂಧಿಸಿದಂತೆ ಈ ರೀತಿಯ ಪ್ರಶ್ನೆ ಬೇರೆ ಯಾವುದಾದರೂ ನ್ಯಾಯಾಲಯದಲ್ಲಿ ಪ್ರಸ್ತಾಪವಾಗಿತ್ತೆ? ಯೇಸು ಕ್ರಿಸ್ತ ಬೆಥ್ಲೆಹೆಮ್‌ನಲ್ಲಿ ಜನಿಸಿದ್ದನ್ನು ಯಾರಾದರೂ ಪ್ರಶ್ನಿಸಿದ್ದರೆ? ಆ ಬಗ್ಗೆ ವಿಶ್ವದ ಯಾವುದಾದರೂ ನ್ಯಾಯಾಲಯ ವಿಚಾರಣೆ ನಡೆಸಿದೆಯೇ ಎಂದು ಪರಾಶರನ್‌ ಅವರನ್ನೇ ಕೇಳಿತು. ಪರಿಶೀಲಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಅವರು ತಿಳಿಸಿದರು. ಮಂಗಳವಾರದಿಂದ ಸುಪ್ರೀಂಕೋರ್ಟ್‌ನಲ್ಲಿ ಅಯೋಧ್ಯೆ ವಿವಾದ ಕುರಿತು ದಿನಂಪ್ರತಿ ವಿಚಾರಣೆ ನಡೆಯುತ್ತಿದೆ.