Asianet Suvarna News Asianet Suvarna News

ಹುಸಿಯಾಯ್ತು ರೈತರಿಗೆ ಕೊಟ್ಟ ಭರವಸೆ?

ಎಕ್ಸಿಸ್ ಬ್ಯಾಂಕ್ ನಿಂದ ರೈತರಿಗೆ ವಾರೆಂಟ್ ಜಾರಿ ಮಾಡಿದ್ದು ಅದಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರೂ ಕೂಡ ಆತಂಕ ತಪ್ಪಿಲ್ಲ. 

Axis Bank Warrant Issue Fear Continue in Farmers
Author
Bengaluru, First Published Nov 11, 2018, 8:46 AM IST

ಬೆಳಗಾವಿ :  ದೂರದ ಕೋಲ್ಕತಾ ನ್ಯಾಯಾಲಯದಲ್ಲಿ ದಾಖಲಾಗಿರುವ ಎಕ್ಸಿಸ್‌ ಬ್ಯಾಂಕ್‌ ಚೆಕ್‌ ಬೌನ್ಸ್‌ ಕೇಸುಗಳ ಕಾನೂನಿನ ಸಂಕೋಲೆಯಲ್ಲಿ ಸಿಲುಕಿರುವ ಬೆಳಗಾವಿ ಜಿಲ್ಲೆಯ 180ಕ್ಕೂ ಹೆಚ್ಚು ರೈತರ ಬವಣೆ ಸದ್ಯಕ್ಕೆ ತೀರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕದ ನ್ಯಾಯಾಲಯಕ್ಕೆ ವರ್ಗಾಯಿಸುವ ಬಗ್ಗೆ ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳು ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ನೀಡಿದ ಭರವಸೆ ಈಡೇರಿಸುವುದು ಸದ್ಯಕ್ಕೆ ಕಷ್ಟಸಾಧ್ಯ ಎಂಬ ಅಭಿಪ್ರಾಯ ಕಾನೂನು ತಜ್ಞರಿಂದ ವ್ಯಕ್ತವಾಗಿದೆ. ಹೀಗೆ ಮಾಡಲು ಒಂದೋ ಸುಪ್ರೀಂಕೋರ್ಟ್‌ನಿಂದ ಅನುಮತಿ ಪಡೆಯಬೇಕು ಅಥವಾ ಅಲ್ಲಿ ಕೇಸುಗಳನ್ನು ಕೈಬಿಟ್ಟು ಇಲ್ಲಿ ಹೊಸದಾಗಿ ಮೊಕದ್ದಮೆಗಳನ್ನು ಹೂಡಬೇಕು. ಇದನ್ನು ಹೊರತುಪಡಿಸಿದರೆ ಕೋಲ್ಕತಾ ಕೇಸು, ಕರ್ನಾಟಕಕ್ಕೆ ವರ್ಗಾವಣೆಗೊಳ್ಳುವ ಪರ್ಯಾಯ ಮಾರ್ಗೋಪಾಯ ಇಲ್ಲ ಎನ್ನುತ್ತಾರೆ ಕಾನೂನು ಪಂಡಿತರು.

ಈಗಾಗಲೇ ಚೆಕ್‌ ಬೌನ್ಸ್‌ ಮೊಕದ್ದಮೆಗಳಲ್ಲಿ ರೈತರು ವಾರಂಟ್‌ ಸುಳಿಗೆ ಸಿಲುಕಿದ್ದಾರೆ. ಇದನ್ನು ಹಿಂಪಡೆಯಲು ಸೂಕ್ತ ವ್ಯವಸ್ಥೆ ಮಾಡುವುದಾಗಿ ಎಕ್ಸಿಸ್‌ ಬ್ಯಾಂಕ್‌ ಪ್ರತಿನಿಧಿಗಳು ಜಿಲ್ಲಾಡಳಿತದ ಸಮ್ಮುಖದಲ್ಲಿ ಇತ್ತೀಚೆಗೆ ರೈತರ ಜೊತೆಗೆ ನಡೆಸಿದ ಸಭೆಯಲ್ಲಿ ಭರವಸೆ ನೀಡಿದ್ದರು. ಇದು ಇನ್ನೂ ಈಡೇರಿಲ್ಲ. ‘ಒನ್‌ಟೈಮ್‌ ಸೆಟ್‌್ಲಮೆಂಟ್‌’ (ಒಂದೇ ಬಾರಿಗೆ ಚುಕ್ತಾ) ನೆಪವೊಡ್ಡಿ ಸಭೆಗಳ ಮೇಲೆ ಸಭೆಗಳು ಆಯೋಜನೆಯಾಗುತ್ತಿವೆಯಷ್ಟೇ ಹೊರತು, ವಾರಂಟ್‌ ಹಿಂಪಡೆವ ಬಗ್ಗೆ ಯಾವುದೇ ವ್ಯವಸ್ಥೆ ಆಗುತ್ತಿಲ್ಲ. ಆದರೂ, ವಾರಂಟ್‌ ಉರುಳಿಗೆ ಸಿಲುಕಿರುವ ರೈತರು, ಕಡೇಪಕ್ಷ ಕೇಸುಗಳಾದರೂ ಕರ್ನಾಟಕಕ್ಕೆ ವರ್ಗಾವಣೆಗೊಂಡರೆ ದೂರದ ಕೋಲ್ಕತಾಕ್ಕೆ ಹೋಗುವ ಸಂಕಷ್ಟದಿಂದ ಪಾರಾಗುವ ಆಶಾಭಾವನೆಯಲ್ಲಿ ಇದ್ದರು. ಇದೀಗ ಕೇಸುಗಳ ವರ್ಗಾವಣೆಯೂ ಕಷ್ಟಸಾಧ್ಯ ಎಂಬ ಅಭಿಪ್ರಾಯ ಹೊರಹೊಮ್ಮುತ್ತಿರುವುದರಿಂದ ರೈತರು ಮತ್ತೂ ಚಿಂತಾಕ್ರಾಂತರಾಗಿದ್ದಾರೆ.

ಬಾಯ್ಮಾತಿನ ಭರವಸೆ?: ಕೋಲ್ಕತಾ ಕೋರ್ಟಿನಿಂದ ರೈತರಿಗೆ ಬಂಧನದ ವಾರಂಟ್‌ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರೈತ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದವು. ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಬ್ಯಾಂಕ್‌ ಅಧಿಕಾರಿಗಳಿಗೆ ರೈತರಿಗೆ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನ.7ರಂದು ನಡೆದ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳು ನ.13ರ ಬಳಿಕ ಒನ್‌ ಟೈಂ ಸೆಟ್‌್ಲಮೆಂಚ್‌(ಒಟಿಎಸ್‌) ಗಾಗಿ ರೈತರೊಂದಿಗೆ ಸಭೆ ನಡೆಸುವಾಗಿ ತಿಳಿಸಿದ್ದರು. ಮಾತ್ರವಲ್ಲದೆ ಕೋಲ್ಕತಾ ಕೋರ್ಟ್‌ನಲ್ಲಿರುವ ಪ್ರಕರಣವನ್ನು ಕರ್ನಾಟಕದ ಕೋರ್ಟ್‌ಗೆ ವರ್ಗಾಯಿಸುವ ಬಗ್ಗೆ ಪ್ರಯತ್ನ ನಡೆಸುವುದಾಗಿಯೂ ಮೌಖಿಕವಾಗಿ ತಿಳಿಸಿದ್ದರು. ಆದರೆ ಈ ರೀತಿ ವರ್ಗಾವಣೆ ಮಾಡಲು ಕಾನೂನು ತೊಡಕು ಇದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ಏನು ತೊಡಕು?: ಒಂದು ಕೋರ್ಟಿನಿಂದ ಮತ್ತೊಂದು ಕೋರ್ಟಿಗೆ ಪ್ರಕರಣ ವರ್ಗಾಯಿಸಬೇಕಾದರೆ ಸುಪ್ರಿಂ ಕೋರ್ಟ್‌ನಿಂದ ಅನುಮತಿ ಅಗತ್ಯವಾಗಿರುತ್ತದೆ. ವರ್ಗಾವಣೆಗೆ ಸಮರ್ಪಕ ಕಾರಣಗಳನ್ನೂ ನೀಡಬೇಕಾಗುತ್ತದೆ. ಅದನ್ನು ಒಪ್ಪುವುದು ಬಿಡುವುದು ಸುಪ್ರೀಂ ಕೋರ್ಟಿನ ವಿವೇಚನೆಗೆ ಬಿಟ್ಟವಿಷಯ. ಇಲ್ಲವಾದಲ್ಲಿ ಕೋಲ್ಕತಾ ನ್ಯಾಯಾಲಯದಲ್ಲಿನ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಕರ್ನಾಟಕದ ನ್ಯಾಯಾಲಯದಲ್ಲಿ ಹೊಸದಾಗಿ ಪ್ರಕರಣ ದಾಖಲಿಸಬೇಕು. ಇದಕ್ಕೆ ಬ್ಯಾಂಕಿನ ಒಪ್ಪಿಗೆಯೂ ಅಗತ್ಯ. ಇವೆರಡೂ ಶೀಘ್ರದಲ್ಲೇ ನಡೆಯುವ ಕಾರ್ಯವಲ್ಲ. ಹೀಗಾಗಿ ಬ್ಯಾಂಕ್‌ ಅಧಿಕಾರಿಗಳು ವೃಥಾ ರೈತರ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ರೈತರ ಅಳಲಾಗಿದೆ.

ಕೋಲ್ಕತಾ ನ್ಯಾಯಾಲಯದಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವರ್ಗಾವಣೆ ಮಾಡುವುದು ಕಷ್ಟಸಾಧ್ಯ. ಆದರೆ, ಹಿಂಪಡೆದು ರಾಜ್ಯದಲ್ಲಿರುವ ನ್ಯಾಯಾಲಯಗಳಲ್ಲಿ ಹೊಸದಾಗಿ ಪ್ರಕರಣ ದಾಖಲಿಸಬಹುದು. ಪ್ರಕರಣಗಳನ್ನು ವರ್ಗಾವಣೆ ಮಾಡುವುದಾದರೆ ಬಹಳ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸುಧೀರಕುಮಾರ ರೆಡ್ಡಿ, ಬೆಳಗಾವಿ ಎಸ್‌ಪಿ

ಸುಪ್ರೀಂ ಒಪ್ಪಿದರಷ್ಟೇ ವರ್ಗ  :  ಕೋಲ್ಕತಾ ನ್ಯಾಯಾಲಯದಲ್ಲಿ ಬ್ಯಾಂಕ್‌ ಅಧಿಕಾರಿಗಳು ರೈತರ ವಿರುದ್ಧ ಹೂಡಿರುವ ದಾವೆಯನ್ನು ರಾಜ್ಯಕ್ಕೆ ವರ್ಗಾವಣೆ ಮಾಡಬೇಕೆಂದಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ನಂತರ ವರ್ಗಾವಣೆಗೆ ಸಂಬಂಧಿಸಿದಂತೆ ಸಮಂಜಸ ಕಾರಣಗಳನ್ನು ನೀಡಬೇಕು. ಆದರೆ ಈ ಮೇಲ್ಮನವಿಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರಿ ಸುಪ್ರೀಂ ಕೋರ್ಟ್‌ ಹೊಂದಿರುತ್ತದೆ.

- ಎಫ್‌.ಎಸ್‌.ಸಿದ್ದನಗೌಡರ, ವಕೀಲರು

Follow Us:
Download App:
  • android
  • ios