Asianet Suvarna News Asianet Suvarna News

ಆಟೋ ಚಾಲಕನ ಪತ್ನಿ ಈಗ ಶಿವಮೊಗ್ಗ ಮೇಯರ್‌

ಆಟೋ ಚಾಲಕನ ಪತ್ನಿಯ ಕನಸು ಒಂದು ಹಂತದಲ್ಲಿ ಸೀಮಿತ. ಆದರೆ ಇದೆಲ್ಲವನ್ನೂ ಮೀರಿ ಶಿವಮೊಗ್ಗ ನಗರಪಾಲಿಕೆಯ ಮೇಯರ್‌ ಗಿರಿ ಇದೀಗ ಅವರ ಪಾಲಿಗೆ ಬಂದಿದೆ. ಕುಟುಂಬದ ಕಷ್ಟಕೋಟಲೆಗಳನ್ನು ನಿರ್ವಹಿಸಿ ಯಶಸ್ಸು ಸಾಧಿಸುವ ಹೊತ್ತಿಗೆ ಇಡೀ ನಗರದ ಬೆಳವಣಿಗೆಯ ಜವಾಬ್ದಾರಿ ಹೆಗಲೇರಿದೆ.

Auto Drivers Wife Becomes Mayor Of Shivamogga
Author
Bengaluru, First Published Sep 5, 2018, 8:02 AM IST

ಶಿವಮೊಗ್ಗ :  ಅದೃಷ್ಟಅನ್ನುವುದು ಯಾರ ಪಾಲಿಗೆ ಯಾವಾಗ ಬರುವುದೋ ಗೊತ್ತಿಲ್ಲ. ಎರಡು ತಿಂಗಳ ಹಿಂದೆ ಮನೆವಾರ್ತೆ, ಬದುಕು.. ಇತ್ಯಾದಿಗಳ ಕುರಿತಷ್ಟೇ ತಲೆ ಕೆಡಿಸಿಕೊಳ್ಳುತ್ತಿದ್ದ ಲತಾ ಗಣೇಶ್‌ ಇದೀಗ ಶಿವಮೊಗ್ಗದ ಪ್ರಥಮ ಪ್ರಜೆಯಾಗಲು ಸಜ್ಜಾಗಿದ್ದಾರೆ.

ಆಟೋ ಚಾಲಕನ ಪತ್ನಿಯ ಕನಸು ಒಂದು ಹಂತದಲ್ಲಿ ಸೀಮಿತ. ಆದರೆ ಇದೆಲ್ಲವನ್ನೂ ಮೀರಿ ಶಿವಮೊಗ್ಗ ನಗರಪಾಲಿಕೆಯ ಮೇಯರ್‌ ಗಿರಿ ಇವರ ಪಾಲಿಗೆ ಬಂದಿದೆ. ಕುಟುಂಬದ ಕಷ್ಟಕೋಟಲೆಗಳನ್ನು ನಿರ್ವಹಿಸಿ ಯಶಸ್ಸು ಸಾಧಿಸುವ ಹೊತ್ತಿಗೆ ಇಡೀ ನಗರದ ಬೆಳವಣಿಗೆಯ ಜವಾಬ್ದಾರಿ ಹೆಗಲೇರಿ ಕೂತಿದೆ.

ಇವರೇ ಲತಾ ಗಣೇಶ. ಗಾಡಿಕೊಪ್ಪ 6ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕೊನೆ ಗಳಿಗೆಯಲ್ಲಿ ಟಿಕೆಟ್‌ ದಕ್ಕಿಸಿಕೊಂಡು ಸ್ಪರ್ಧೆಗೆ ಇಳಿದಿದ್ದರು. ಪರಿಶಿಷ್ಟಜಾತಿ ಮಹಿಳಾ ಕ್ಷೇತ್ರವಾದ ಇಲ್ಲಿ ಗೆಲುವನ್ನು ಕೂಡ ದಾಖಲಿಸಿದರು. ಬೆನ್ನಲ್ಲೇ ಸರ್ಕಾರ ಶಿವಮೊಗ್ಗ ನಗರಪಾಲಿಕೆಯ ಮೇಯರ್‌ ಸ್ಥಾನವನ್ನು ಪರಿಶಿಷ್ಟಜಾತಿ ಮಹಿಳೆಗೆ ಮೀಸಲಾಗಿರಿಸಿ ಆದೇಶ ಹೊರಡಿಸಿತು. ಬಿಜೆಪಿಯಲ್ಲಿ ಈ ಸ್ಥಾನಕ್ಕೆ ಅರ್ಹರಾಗಿರುವವರು ಇವರೊಬ್ಬರೇ. ಹೀಗಾಗಿ ನಗರಪಾಲಿಕೆ ಸದಸ್ಯರಾಗಿ ಗೆದ್ದ ಬೆನ್ನಲ್ಲೇ ಪಾಲಿಕೆಯ ಮೇಯರ್‌ ಸ್ಥಾನ ಇವರನ್ನು ಹುಡುಕಿಕೊಂಡು ಮನೆ ಬಾಗಿಲಿಗೆ ಬಂದಿದೆ.

ಗಣೇಶ್‌ ಸಾಮಾನ್ಯ ಆಟೋ ಚಾಲಕ. ನಿತ್ಯದ ಬದುಕಿಗೆ ಆಟೋ ಇವರ ಪಾಲಿಗೆ ದುಡಿಮೆಯ ಆಧಾರ. ಮೂರು ಜನ ಹೆಣ್ಣು ಮಕ್ಕಳು, ಒಬ್ಬ ಪುತ್ರ ಇವರ ಕುಟುಂಬ. ಪುತ್ರ ಇದೀಗ ಹುಬ್ಬಳ್ಳಿಯಲ್ಲಿ ಆಟೋ ಚಾಲಕನಾಗಿದ್ದಾರೆ. ಗಾಡಿಕೊಪ್ಪದ ಮೊದಲ ಕ್ರಾಸ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಇವರ ವಾಸ.

"

ರಾಜಕೀಯ ಹೊಸದೇನಲ್ಲ:  ಲತಾ ಗಣೇಶ್‌ ಅವರ ಸೋದರ ಆರ್‌.ಲಕ್ಷಣ್‌ ಬಿಜೆಪಿಯಲ್ಲಿ ಸಕ್ರಿಯ ಮುಖಂಡರು. ಈ ಹಿಂದೆ ಹೊಸಮನೆ ಬಡಾವಣೆಯಿಂದ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಇವರ ನೆರಳಿನಲ್ಲಿ ರಾಜಕಾರಣ ಆರಂಭಿಸಿದ ಲತಾ ಗಣೇಶ್‌ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದರು. ಗಾಡಿಕೊಪ್ಪದಲ್ಲಿ ಬಿಜೆಪಿಯನ್ನು ಸಂಘಟಿಸುತ್ತಾ ಗಾಡಿಕೊಪ್ಪ ವಾರ್ಡ್‌ನ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.

ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಸಕ್ರಿಯ ಸದಸ್ಯರಾಗಿ, ಒಕ್ಕೂಟದ ಅಧ್ಯಕ್ಷರಾಗಿ, ವಲಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಆಡಳಿತದ ಅನುಭವ ಪಡೆದರು. ಬ್ಯಾಂಕ್‌ ವ್ಯವಹಾರವನ್ನು ನಿರ್ವಹಿಸುವ ರೀತಿಯನ್ನು ಕಲಿತರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಾಡಿಕೊಪ್ಪ ಬೂತ್‌ ಪ್ರಮುಖರಾಗಿ ಕಾರ್ಯ ನಿರ್ವಹಿಸಿದ್ದರು.

ಆದರೆ ಮುಂದಿನ ಭವಿಷ್ಯವನ್ನು ಅವರು ಊಹಿಸಿರಲಿಲ್ಲ. ನಗರಪಾಲಿಕೆ ಚುನಾವಣೆ ಘೋಷಣೆಯಾದಾಗ ಎಲ್ಲರಂತೆ ಇವರೂ ಟಿಕೆಟ್‌ ಕೊಟ್ಟರೆ ಒಂದು ಕೈ ನೋಡೋಣ ಎಂದುಕೊಂಡಿದ್ದರು. ಅನಿರೀಕ್ಷಿತವಾಗಿ ಟಿಕೆಟ್‌ ಇವರ ಪಾಲಿಗೆ ಬಂದಿತು. ಇಡೀ ಪಕ್ಷ ಇವರ ಪರವಾಗಿ ಕೆಲಸ ಮಾಡಿತು. ಗೆದ್ದೂ ಬಿಟ್ಟರು. ಈಗ ಪಾಲಿಕೆಯ ಮೇಯರ್‌ ಗಿರಿ ಇವರನ್ನು ಹುಡುಕಿಕೊಂಡು ಬಂದಿದೆ.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿರುವ ಶಿವಮೊಗ್ಗದ ಅಭಿವೃದ್ಧಿಯನ್ನು ನಿರ್ಣಾಯಕ ಘಟ್ಟದಲ್ಲಿ ನಿರ್ವಹಿಸುವ ಜವಾಬ್ದಾರಿ ಇವರ ಪಾಲಿಕೆ ಬಂದಿದೆ. ಯಾವುದೇ ಹುದ್ದೆ ಬಂದರೂ ನಿಭಾಯಿಸುತ್ತೇನೆ ಎಂಬ ಛಾತಿಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಇದನ್ನು ಕೂಡ ಸಮರ್ಥವಾಗಿ ನಿಭಾಯಿಸುತ್ತೇನೆ ಎನ್ನುತ್ತಾರೆ.

ನಿಜ, ಇದು ಅಚ್ಚರಿಯ ವಿಷಯ. ಆದರೆ ಯಾವುದೇ ಹುದ್ದೆ ಸಿಕ್ಕರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ಆತ್ಮ ವಿಶ್ವಾಸವಿದೆ. ಗೆಲುವು ದಕ್ಕಿದಾಗ ಈ ವಾರ್ಡಿನ ಅಭಿವೃದ್ಧಿಯ ಕುರಿತು ಚಿಂತಿಸಲು ಆರಂಭಿಸಿದ್ದೆ. ಇದೀಗ ಇಡೀ 35 ವಾರ್ಡಿನ ಅಭಿವೃದ್ಧಿಯ ಕುರಿತು ಚಿಂತಿಸುವ ಸಂದರ್ಭ ಎದುರಾಗಿದೆ.

-ಲತಾ ಗಣೇಶ್‌, ಸಂಭಾವ್ಯ ಮೇಯರ್‌, ಶಿವಮೊಗ್ಗ ನಗರಪಾಲಿಕೆ

Follow Us:
Download App:
  • android
  • ios