ಜೇವರ್ಗಿ ತಾಲೂಕಿನ ಆಂದೋಲ ಪೀಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿಗಳ ಮೇಲೆ ಇಲ್ಲಸಲ್ಲದ ಮೊಕದ್ದಮೆ ದಾಖಲಿಸಿ, ಅವರನ್ನು ಬಂಧಿಸುವ ಹುನ್ನಾರ ನಡೆಯುತ್ತಿರುವುದು ಖಂಡನೀಯ ಎಂದು ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ: ಜೇವರ್ಗಿ ತಾಲೂಕಿನ ಆಂದೋಲ ಪೀಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿಗಳ ಮೇಲೆ ಇಲ್ಲಸಲ್ಲದ ಮೊಕದ್ದಮೆ ದಾಖಲಿಸಿ, ಅವರನ್ನು ಬಂಧಿಸುವ ಹುನ್ನಾರ ನಡೆಯುತ್ತಿರುವುದು ಖಂಡನೀಯ ಎಂದು ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಆಂದೋಲ ಶ್ರೀಗಳನ್ನು ಬಂಧಿಸಲು ನಡೆಯುತ್ತಿರುವ ಹುನ್ನಾರವನ್ನು ಖಂಡಿಸಿ ಹಮ್ಮಿಕೊಂಡಿದ್ದ ಸಂತರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶ ಭಕ್ತ ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಶ್ರೀಗಳ ಮೇಲೆ ತೇಜೋವಧೆಯ ಅಕ್ಷಮ್ಯ ನಡೆಯಾಗಿದೆ. ಒಂದು ವೇಳೆ ಶ್ರೀಗಳನ್ನು ಬಂಧಿಸಲು ಮುಂದಾದರೆ ರಾಜ್ಯಾದ್ಯಂತ ಸಂತರು ಸಮಾಜದ ಜೊತೆ ಸೇರಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂದೋಲಾ ಗ್ರಾಮದಲ್ಲಿ ಅಂಗಡಿ ತೆರವಿಗೆ ಸಂಬಂಧಿಸಿದಂತೆ ನಡೆದಿರುವ ಬೀದಿ ಜಗಳಕ್ಕೂ ಆಂದೋಲಾ ಶ್ರೀಗಳಿಗೂ ಯಾವುದೇ ಸಂಬಂಧವಿಲ್ಲ. ಕೆಲ ಸಂಘಟನೆಗಳು ಆಂದೋಲಾ ಶ್ರೀಗಳ ಹೆಸರಿಗೆ ಮಸಿ ಬಳಿಯುವುದಕ್ಕೆ ಇಂತಹ ಕೆಲಸ ಮಾಡುತ್ತಿದ್ದಾರೆ. ಎಫ್‌ಐಆರ್’ನಲ್ಲಿ ಅವರ ಹೆಸರೂ ಸಹ ಇಲ್ಲ. ಕಾನೂನು ವಿರುದ್ಧವಾಗಿ ದುರುದ್ದೇಶದಿಂದ ಬಂಧನ ಮಾಡಲು ಹೊರಟಿದ್ದಾರೆ. ಸಿದ್ದಲಿಂಗ ಶ್ರೀಗಳು ಸಮಾಜದ್ರೋಹಿ ಕೆಲಸ ಮಾಡಿದರೆ ಸಾಕ್ಷಿಗಳನ್ನು ತೋರಿಸಿ ಬಂಧನ ಮಾಡಲಿ. ಆದರೆ ಶ್ರೀಗಳ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಬಂಧನದ ಹುನ್ನಾರ ನಡೆಯುವ ಕ್ರಮ ಸರಿಯಲ್ಲ ಎಂದು ಹೇಳಿದರು.
ಶಂಕರಾಚಾರ್ಯ, ಪರಮಾನಂದ ಸ್ವಾಮೀಜಿ, ಸಿದ್ದಾನಂದ ಸ್ವಾಮೀಜಿ, ಪ್ರಶಾಂತ ಸ್ವಾಮೀಜಿ, ಪಾಂಡುರಂಗ ಮಹಾರಾಜ, ಮುನೀಂದ್ರ ಶಿವಾಚಾರ್ಯ, ಬಳಿರಾಮ ಮಹಾರಾಜ, ಸಿದ್ದಲಿಂಗ ಶ್ರೀ, ರೇವಣಸಿದ್ದ ಶಿವಾಚಾರ್ಯ ಸರಡಗಿ ಇದ್ದರು.
