ಚಿತ್ರದುರ್ಗ (ಸೆ.05): ಮುಂದಿನ ವರ್ಷದ ಬಿತ್ತನೆಗೆ ರೈತರಿಗೆ ಉಚಿತ ಬೀಜ, ಗೊಬ್ಬರಗಳನ್ನು ಸರ್ಕಾರದಿಂದ ನೀಡಬೇಕೆಂದು ಆಗ್ರಹಿಸಿ ಅ.17 ರಂದು ವಿಧಾನಸೌಧ ಮುತ್ತಿಗೆ ಹಾಕುವುದಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಸತತ ಬರಗಾಲದಿಂದ ತತ್ತರಿಸಿದರೂ ಸಹ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸದೆ ಮೂಕ, ಕಿವುಡ, ಜಾಣ ತರಹದ ನಟನೆಯನ್ನು ಮಾಡುತ್ತಿದೆ. ಒಂದು ಕಡೆ ರೈತರಿಗೆ ಬಲವಂತದ ಸಾಲ ವಸೂಲಾತಿ ಮಾಡಬೇಡಿ ಎಂದು ಹೇಳಿದರೂ, ಖಾಸಗಿ, ರಾಷ್ಟ್ರೀಕೃತ ಬ್ಯಾಂಕುಗಳು ಬಲವಂತದಿಂದ ಬೆಳೆ ಸಾಲ, ಟ್ರ್ಯಾಕ್ಟ್ ರಗಳ ಸಾಲ, ಬಂಗರದ ಸಾಲಗಳನ್ನು ವಸೂಲು ಮಾಡುತ್ತಿವೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ಬ್ಯಾಂಕಿನ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
