ನವದೆಹಲಿ(ಮೇ 01): ದೆಹಲಿಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರ ಮನೆ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ತಿವಾರಿ ಮನೆಯಲ್ಲಿದ್ದ ಇಬ್ಬರಿಗೆ ಗಾಯವಾಗಿದೆ. ತನ್ನನ್ನು ಟಾರ್ಗೆಟ್ ಮಾಡಿಕೊಂಡು ಈ ದಾಳಿ ನಡೆದಿರಬಹುದು ಎಂದು ಮನೋಜ್ ತಿವಾರಿ ಶಂಕಿಸಿದ್ದಾರೆ. ಅದೃಷ್ಟವಶಾತ್, ದಾಳಿ ನಡೆದ ಸಮಯದಲ್ಲಿ ಬಿಜೆಪಿ ಮುಖಂಡರು ತಮ್ಮ ಮನೆಯಲ್ಲಿರಲಿಲ್ಲವೆನ್ನಲಾಗಿದೆ. 8-10 ಮಂದಿ ಇದ್ದ ತಂಡವು ಈ ದುಷ್ಕೃತ್ಯ ಎಸಗಿದ್ದು, ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಕಾರ್ ಡಿಕ್ಕಿ ಪ್ರಕರಣ:
ಪೊಲೀಸರು ತಿಳಿಸುವ ಪ್ರಕಾರ, ಮನೋಜ್ ತಿವಾರಿಯವರ ನಿವಾಸದೆದುರು ಅವರ ಕಾರನ್ನು ಡ್ರೈವರ್ ತಿರುಗಿಸುತ್ತಿದ್ದಾಗ ವ್ಯಾಗಾನ್ ಆರ್ ಕಾರೊಂದಕ್ಕೆ ಡಿಕ್ಕಿಹೊಡೆದಿದೆ. ಕಾರಿನಲ್ಲಿ ತಿವಾರಿ ಇರಲಿಲ್ಲ. ಡ್ರೈವರ್ ಮತ್ತು ಒಬ್ಬ ಸಿಬ್ಬಂದಿ ಮಾತ್ರ ಕಾರಿನಲ್ಲಿದ್ದರು. ವ್ಯಾಗನ್ ಆರ್ ಕಾರಿನಲ್ಲಿ ಇಬ್ಬರು ಸಹೋದರರಿದ್ದರು. ಈ ವೇಳೆ ತಿವಾರಿ ಕಡೆಯವರು ಮತ್ತು ವ್ಯಾಗನ್ ಆರ್ ಕಾರಿನ ಕಡೆಯವರಿಗೆ ಜಗಳವಾಗಿದೆ.

ಇದಾದ ಬಳಿಕ ತಿವಾರಿ ಕಡೆಯವರು ಮನೆಗೆ ಬಂದುಬಿಡುತ್ತಾರೆ. ಆಗ, ವ್ಯಾಗನ್ ಆರ್ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಮ್ಮ ಸಹಚರರನ್ನು ಕರೆಸಿಕೊಳ್ಳುತ್ತಾರೆ. ರಾತ್ರಿ 1 ಗಂಟೆ ಸುಮಾರಿಗೆ ಅವರೆಲ್ಲರೂ ಮನೋಜ್ ತಿವಾರಿ ಮನೆಗೆ ನುಗ್ಗುತ್ತಾರೆ. ಅಲ್ಲಿ, ತಿವಾರಿಯವರ ಪಿಎ ಮತ್ತು ಅಡುಗೆಯವನ ಮೇಲೆ ಹಲ್ಲೆ ಮಾಡುತ್ತಾರೆ. ಅಲ್ಲಿದ್ದ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ತತ್'ಕ್ಷಣವೇ ಬರುವ ಪೊಲೀಸರು ಐವರನ್ನು ಬಂಧಿಸುತ್ತಾರೆ. ಬಿಜೆಪಿ ಮುಖಂಡ ಮನೋಜ್ ತಿವಾರಿ ರಾತ್ರಿ 2:30ಕ್ಕೆ ಮನೆಗೆ ವಾಪಸ್ ಆಗುತ್ತಾರೆ.

ಬಂಧಿತರಲ್ಲಿ ಸಹೋದರರಾದ ಜೈಕುಮಾರ್(38) ಮತ್ತು ಜಸ್ವಂತ್(33) ಕೂಡ ಇದ್ದಾರೆ. ಮನೋಜ್ ತಿವಾರಿ ಮನೆಯಲ್ಲಿ ತಮ್ಮ ಮೇಲೆ ಹಲ್ಲೆಯಾಯಿತು ಎಂದು ಇವರೂ ಕೂಡ ಪೊಲೀಸರಿಗೆ ಪ್ರತಿದೂರು ಸಲ್ಲಿಸುತ್ತಾರೆ. ಆದರೆ, ಪೊಲೀಸರು ಎಫ್'ಐಆರ್ ದಾಖಲಿಸಿಕೊಳ್ಳಲು ನಿರಾಕರಿಸುತ್ತಾರೆ.

ತಿವಾರಿಯ ಸಿಬ್ಬಂದಿ ಹೇಳುವ ಪ್ರಕಾರ, ದಾಳಿ ಮಾಡಿದ ಗುಂಪಿನಲ್ಲಿ ಪೊಲೀಸ್ ಯೂನಿಫಾರ್ಮ್'ನಲ್ಲಿದ್ದ ಒಬ್ಬ ವ್ಯಕ್ತಿ ಕೂಡ ಇರುತ್ತಾನೆ. ಆ ಶಂಕಿತ ಪೊಲೀಸನು ಮನೋಜ್ ತಿವಾರಿಯವರ ಹೆಸರನ್ನು ಕೂಗಿದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ತನ್ನ ಮೇಲೆ ಹಲ್ಲೆ ಮಾಡಲೆಂದೇ ಆ ಗುಂಪು ಮನೆಗೆ ಬಂದಿತ್ತೆಂಬುದು ಬಿಜೆಪಿ ಮುಖಂಡನ ಅನುಮಾನ.