ರಾಷ್ಟ್ರೀಯ ಮಟ್ಟದ  2 ದಿನಗಳ ಬಿಜೆಪಿ ಕಾರ್ಯಕಾರಣಿ ಇಂದಿನಿಂದ ಪ್ರಾರಂಭವಾಗಿದ್ದು  ತಲ್ಕಾತೋರಾ ಸ್ಟೇಡಿಯಂನಲ್ಲಿ  ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟನಾ ಭಾಷಣ ಮಾಡುತ್ತಾ, ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ಸೆ.25): ರಾಷ್ಟ್ರೀಯ ಮಟ್ಟದ 2 ದಿನಗಳ ಬಿಜೆಪಿ ಕಾರ್ಯಕಾರಣಿ ಇಂದಿನಿಂದ ಪ್ರಾರಂಭವಾಗಿದ್ದು ತಲ್ಕಾತೋರಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟನಾ ಭಾಷಣ ಮಾಡುತ್ತಾ, ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಇತ್ತೀಚಿಗೆ ಅಮೇರಿಕಾದಲ್ಲಿ ಭಾಷಣ ಮಾಡುತ್ತಾ, ಭಾರತದಲ್ಲಿ ವಂಶಪಾರಂಪರ್ಯವಿದೆ ಎಂದು ವಿವಾದಾತ್ಮವಾಗಿ ಮಾತನಾಡಿದ್ದರು. ಇದನ್ನು ಅಮಿತ್ ತೀವ್ರವಾಗಿ ಖಂಡಿಸುತ್ತಾ, ವಂಶಪಾರಂಪರ್ಯ ಕಾಂಗ್ರೆಸ್'ನ ಸಂಪ್ರದಾಯವೇ ಹೊರತು ಭಾರತದ್ದಲ್ಲ ಎಂದು ಹೇಳಿದರು. ಜೊತೆಗೆ ಮೋದಿ ಸರ್ಕಾರ 12 ಲಕ್ಷ ಕೋಟಿ ಭ್ರಷ್ಟಾಚಾರ ಮಾಡಿದೆ ಎಂದು ಮಾಡಿರುವ ಆರೋಪಕ್ಕೆ ಉತ್ತರವನ್ನು ಕೊಡಬೇಕು. ಜೊತೆಗೆ ತಮ್ಮ ಆಡಳಿತಾವಧಿಯಲ್ಲಿ ದೇಶದ ಅಭಿವೃದ್ಧಿ ಹೇಗಿತ್ತು ಎಂಬುದನ್ನು ತಿಳಿಸಿ ಕೊಡಬೇಕು ಎಂದು ಹೇಳಿದರು.

ವಿತ್ತ ಸಚಿವ ಅರುಣ್ ಜೇಟ್ಲಿ ಮಾತನಾಡುತ್ತಾ, ಪ್ರತಿಪಕ್ಷಗಳನ್ನು ಉದ್ದೀಶಿಸಿಕೊಂಡು, ಆಡಳಿತಾರೂಢ ಸರ್ಕಾರದ ವಿರುದ್ದ ಕಠಿಣ ಶಬ್ದಗಳನ್ನು ಬಳಸುವುದು ಪರ್ಯಾಯ ಮಾರ್ಗವಲ್ಲ. ಯಾವ ರಾಜಕೀಯ ಪಕ್ಷವೂ ಬಿಜೆಪಿಯಷ್ಟು ಸಕ್ರಿಯವಾಗಿಲ್ಲ. ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಬಿಜೆಪಿ ಹೆಚ್ಚು ಕೆಲಸವನ್ನು ಮಾಡುತ್ತಿದೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ಬೇರೆ ದೇಶಗಳು ನಮಗೆ ಸಹಕಾರ ನೀಡಲಿವೆ ಎಂದು ಜೇಟ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತನಾಡಲಿದ್ದಾರೆ.