ಪಕ್ಷದಲ್ಲಿ ಆಂತರಿಕ ವಿರೋಧದ ನಡುವೆಯೂ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ, ಹಗರಣಪೀಡಿತ ನೈಸ್‌ ಸಂಸ್ಥೆಯ ಮುಖ್ಯಸ್ಥ ಅಶೋಕ್‌ ಖೇಣಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕಾಂಗ್ರೆಸ್‌ ಇದೀಗ ಇಕ್ಕಟ್ಟಿಗೆ ಸಿಲುಕಿದೆ.

ನವದೆಹಲಿ : ಪಕ್ಷದಲ್ಲಿ ಆಂತರಿಕ ವಿರೋಧದ ನಡುವೆಯೂ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ, ಹಗರಣಪೀಡಿತ ನೈಸ್‌ ಸಂಸ್ಥೆಯ ಮುಖ್ಯಸ್ಥ ಅಶೋಕ್‌ ಖೇಣಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕಾಂಗ್ರೆಸ್‌ ಇದೀಗ ಇಕ್ಕಟ್ಟಿಗೆ ಸಿಲುಕಿದೆ. ಖೇಣಿ ಸೇರ್ಪಡೆಯನ್ನು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಪ್ರತಿಪಕ್ಷಗಳು, ಸಿದ್ದರಾಮಯ್ಯ ಅವರ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿ ಆರಂಭಿಸಿವೆ. ‘ಇದೊಂದು ಕೆಟ್ಟ’ ನಿರ್ಧಾರ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕುಟುಕಿದರೆ, ಖೇಣಿಯನ್ನು ಜೈಲಿಗೆ ಕಳುಹಿಸುತ್ತೇನೆಂದು ಗುಡುಗಿದ್ದವರು ಈಗ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡರು ವ್ಯಂಗ್ಯವಾಡಿದ್ದಾರೆ.

ಏತನ್ಮಧ್ಯೆ, ತಮ್ಮ ನಿರ್ಧಾರವನ್ನು ಸಮರ್ಥನೆ ಮುಂದುವರೆಸಿರುವ ಸಿದ್ದರಾಮಯ್ಯ, ಬಿಜೆಪಿಯ 7-8 ಮಂದಿ ಜೈಲಿಗೆ ಹೋಗಿದ್ದರು. ಅಶೋಕ್‌ ಖೇಣಿ ಏನು ಜೈಲಿಗೆ ಹೋಗಿದ್ರಾ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ಮಾತು ನಿಜವಾಯ್ತು: ದೆಹಲಿಯಲ್ಲಿ ಸೋಮವಾರವಷ್ಟೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಖೇಣಿ ಕಾಂಗ್ರೆಸ್‌ ಸೇರ್ಪಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈಗ ಮಂಗಳವಾರ ಸಂಸತ್‌ನ ಆವರಣದಲ್ಲಿ ಮಂಗಳವಾರ ಮಾತನಾಡಿದ ಕೇಂದ್ರ ಸಚಿವ, ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಸೀದಾ ರುಪಯ್ಯಾ’ ಎಂದು ಪ್ರಧಾನಿ ಮೋದಿ ಟೀಕಿಸಿದ್ದರು. ಖೇಣಿ ಸೇರ್ಪಡೆಯಿಂದ ಪ್ರಧಾನಿ ಹೇಳಿಕೆ ರುಜುವಾತಾದಂತಾಗಿದೆ ಎಂದು ವ್ಯಂಗ್ಯವಾಡಿದರು.

ಖೇಣಿ ಅವರನ್ನು ನಾವು ಜೈಲಿಗೆ ಕಳುಹಿಸುತ್ತೇವೆಂದು ಹೇಳಿದ್ದ ಸಿಎಂ ಜೈಲಿಗೆ ಕಳುಹಿಸುವ ಬದಲು ಅವರನ್ನು ಕಾಂಗ್ರೆಸ್‌ಗೆ ಬರ ಮಾಡಿಕೊಂಡಿದ್ದು, ಇದೇ ಸೀದಾ ರುಪಯ್ಯಾ ರಾಜಕೀಯ. ಖೇಣಿ ಭ್ರಷ್ಟಎಂದು ಸಿದ್ದರಾಮಯ್ಯ ಅವರೇ ಜರಿಯುತ್ತಿದ್ದರು. ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಹೇಳುತ್ತಿದ್ದರು. ಲಕ್ಷ ಕೋಟಿ ರುಪಾಯಿ ಅವ್ಯವಹಾರ ಮತ್ತು ಜಮೀನು ದುರ್ಬಳಕೆ ಆರೋಪಗಳು ಖೇಣಿ ಮೇಲೆ ಬಂದಿತ್ತು. ಆದರೂ ಖೇಣಿಯನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಲಾಗಿದೆ ಎಂದು ಕಿಡಿಕಾರಿದರು.

‘ನೈಸ್‌ ಡೀಲ್‌’: ಸಿದ್ದರಾಮಯ್ಯ ಪ್ರತಿ ಪಕ್ಷದ ನಾಯಕರಾಗಿದ್ದಾಗ ಖೇಣಿ ಬಗ್ಗೆ ಬೆಳಗ್ಗಿನಿಂದ ಸಂಜೆ ವರೆಗೆ ಟೀಕೆ ಮಾಡಿದ್ದರು. ಈಗ ಇದೇ ಸಿದ್ದು ತಾವೇ ಮುಂದೆ ನಿಂತು ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಕಾರಣ ಖೇಣಿ ಜೊತೆ ಸಿದ್ದರಾಮಯ್ಯ‘ನೈಸ್‌ ಡೀಲ್‌’ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯ ಸಭೆಯಲ್ಲಿ ಆರೋಪಿಸಿದ್ದಾರೆ.

ಖೇಣಿಯನ್ನು ಮಾತ್ರ ಪಕ್ಷಕ್ಕೆ ತೆಗೆದುಕೊಂಡಿದ್ದೇವೆ, ನೈಸ್‌ ಕಂಪನಿಯನ್ನಲ್ಲ ಎಂದು ಸಿದ್ದರಾಮಯ್ಯ ಈಗ ಸಮಜಾಯಿಷಿ ನೀಡುತ್ತಿದ್ದಾರೆ. ಖೇಣಿ ಏನು ನೈಸ್‌ ಕಂಪನಿಗೆ ರಾಜಿನಾಮೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ ಶೆಟ್ಟರ್‌, ಸೋಲುವ ಹತಾಶೆಯಿಂದ ಸಿದ್ದರಾಮಯ್ಯ ಏನೇನೋ ಮಾಡುತ್ತಿದ್ದಾರೆ ಎಂದು ಶೆಟ್ಟರ್‌ ಕಾಲೆಳೆದರು.

ಕೆಟ್ಟನಿರ್ಧಾರ: ​​ಈ ನಡುವೆ​, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೂಡ ಸಿದ್ದರಾಮಯ್ಯ ನಿರ್ಧಾರವನ್ನು ಟೀಕಿಸಿದ್ದಾರೆ. ಖೇಣಿ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡುವುದಕ್ಕಿಂತ ಕೆಟ್ಟನಿರ್ಧಾರ ಬೇರೆ ಇಲ್ಲ. ನೈಸ್‌ ರಸ್ತೆ ಅಕ್ರಮದ ವಿರುದ್ಧ ಸದನ ಸಮಿತಿಯ ವರದಿ ವಿಧಾನ ಮಂಡಲದಲ್ಲಿ ಒಪ್ಪಿಗೆಯಾದ ಬಳಿಕ ಏಕೆ ಜಾರಿ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು. ಜೈಲಿಗೆ ಹೋಗಿದ್ರಾ-ಸಿಎಂ: ಖೇಣಿ ಸೇರ್ಪಡೆ ಕುರಿತು ಪ್ರತಿಪಕ್ಷಗಳ ಟೀಕೆಗೆ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿಯ 7-8 ಮಂದಿ ಜೈಲಿಗೆ ಹೋಗಿದ್ದರು. ಖೇಣಿ ಏನಾದ್ರೂ ಜೈಲಿಗೆ ಹೋಗಿದ್ರಾ ಎಂದು ಪ್ರಶ್ನಿಸಿದರು. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದನ್ನು ಪ್ರಶ್ನಿಸುವವರಿಗೆ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು. ಆನಂದ್‌ ಸಿಂಗ್‌, ನಾಗೇಂದ್ರ ಮುಂತಾದ ಜೈಲಿಗೆ ಹೋದ ಶಾಸಕರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಕೇಳಿದಾಗ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆಯೇ ಎಂದು ಹಾರಿಕೆಯ ಉತ್ತರ ನೀಡಿದರು.