Asianet Suvarna News Asianet Suvarna News

ದೆಹಲಿಯಿಂದ ಬೆಂಗಳೂರಿಗೆ ಬಂದ ವಾಜಪೇಯಿ ಅಸ್ಥಿ

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ರಾಜ್ಯದ ನದಿಗಳಲ್ಲಿ ವಿಸರ್ಜನೆ ಮಾಡುವ ಸಲುವಾಗಿ ರಾಜ್ಯಕ್ಕೆ ತರಲಾಗಿದೆ. ಇಲ್ಲಿನ 8 ನದಿಗಳಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ. 

Ashes Of Former Prime Minister Vajpayee Arrived in Karnataka
Author
Bengaluru, First Published Aug 23, 2018, 9:58 AM IST

ಬೆಂಗಳೂರು :  ರಾಜ್ಯದ ಎಂಟು ನದಿಗಳಲ್ಲಿ ಚಿತಾಭಸ್ಮ ವಿಸರ್ಜಿಸುವ ಸಂಬಂಧ ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ಥಿ ಕಲಶವನ್ನು ದೆಹಲಿಯಿಂದ ರಾಜ್ಯಕ್ಕೆ ತರಲಾಗಿದ್ದು, ರಾಜ್ಯ ಬಿಜೆಪಿಯಿಂದ ಭವ್ಯ ಸ್ವಾಗತ ಕೋರಿ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಪಕ್ಷದ ಕಚೇರಿಗೆ ತರಲಾಯಿತು.

ಬುಧವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದ ಸುರೇಶ್‌ ಅಂಗಡಿ, ಬಿಜೆಪಿ ಮುಖಂಡ ಶಿವಕುಮಾರ್‌ ಉದಾಸಿ ದೆಹಲಿಯಿಂದ ತಂದ ಚಿತಾಭಸ್ಮದ ಕಲಶವನ್ನು ರಾಜ್ಯಕ್ಕೆ ತಂದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅಸ್ಥಿ ಕಲಶಕ್ಕೆ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಸೇರಿದಂತೆ ಇತರೆ ಪ್ರಮುಖ ಮುಖಂಡರು ಸ್ವಾಗತ ಕೋರಿದರು.

ಟೋಲ್‌ಗೇಟ್‌ನಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಕಲಶಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಂದ ಬಿಜೆಪಿ ಕಚೇರಿವರೆಗೆ ಪಕ್ಷದ ಕಾರ್ಯಕರ್ತರು ಬೈಕ್‌ರಾರ‍ಯಲಿ ಮೆರವಣಿಗೆ ನಡೆಸಿದರು. ವಿಶೇಷವಾಗಿ ಅಲಂಕರಿಸಿದ ತೆರೆದ ಜೀಪಿನಲ್ಲಿ ಕಲಶವನ್ನು ಇಟ್ಟು ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರು ಮೆರವಣಿಗೆ ಮೂಲಕ ಬಿಜೆಪಿ ಕಚೇರಿವರೆಗೆ ತಂದರು. ಮೆರವಣಿಗೆಯಲ್ಲಿ ವಾಜಪೇಯಿ ಅಮರ್‌ ರಹೇ ಎನ್ನುವ ಘೋಷಣೆ ಕೂಗಿ ಗೌರವ ಅರ್ಪಿಸಿದರು.

ಬಿಜೆಪಿ ಕಚೇರಿಗೆ ಆಗಮಿಸಿದ ಕಲಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಪೂಜೆ ಸಲ್ಲಿಸಿದರು. ಬಿಜೆಪಿ ಕಚೇರಿಯ ಮುಂದೆ ಸಿದ್ಧಪಡಿಸಿದ್ದ ವೇದಿಕೆಯಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ವಾಜಪೇಯಿ ಅಭಿಮಾನಿಗಳು ಸಹ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು. ನಾಗರಿಕರು, ಕಾರ್ಯಕರ್ತರು, ಅಭಿಮಾನಿಗಳು ಬುಧವಾರ ರಾತ್ರಿ 10 ಗಂಟೆವರೆಗೆ ಗೌರವ ಸಲ್ಲಿಸಿದರು.

ಗುರುವಾರ (ಆ.23) ಬಿಜೆಪಿ ಕಚೇರಿಯಿಂದ ಅಸ್ಥಿ ಕಲಶವನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಶ್ರೀರಂಗಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಕಾವೇರಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ನವರಂಗ್‌ ವೃತ್ತ, ವಿಜಯನಗರ, ಗಾಳಿ ಆಂಜನೇಯ ದೇವಸ್ಥಾನ, ರಾಜರಾಜೇಶ್ವರಿನಗರ ವೃತ್ತ, ಕೆಂಗೇರಿ ಮೂಲಕ ಮೆರವಣಿಗೆ ಸಾಗಲಿದೆ. ಈ ವೇಳೆ ನೂರಾರು ಜನರು, ಸ್ವಾಮೀಜಿಗಳು ವಾಜಪೇಯಿ ಅವರ ಅಸ್ಥಿ ಕಲಶಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾದಿಯಾಗಿ ಶ್ರೀರಂಗಪಟ್ಟಣಕ್ಕೆ ಮಧ್ಯಾಹ್ನ ಎರಡು ಗಂಟೆಗೆ ಕಲಶ ತಲುಪಲಿದೆ.

ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಪಿ.ಸಿ.ಮೋಹನ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಇತರರು ತೆರಳಲಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಎಸ್‌.ಎ.ರಾಮದಾಸ್‌ ಇತರರು ಉಪಸ್ಥಿತರಿರುವರು. ಕಾವೇರಿ ನದಿ ಸೇರಿದಂತೆ ರಾಜ್ಯದ ಎಂಟು ನದಿಗಳಲ್ಲಿ ವಾಜಪೇಯಿ ಅವರ ಅಸ್ಥಿಯನ್ನು ವಿಸರ್ಜನೆ ಮಾಡಲಾಗುವುದು. ಆ.25ರಂದು ನೇತ್ರಾವತಿ ನದಿ, ಮಲಪ್ರಭಾ ನದಿ, ಕೃಷ್ಣಾ ನದಿ, ಕಾರಂಜಾ ನದಿ, ತುಂಗಭದ್ರಾ ನದಿ, ಶರಾವತಿ, ಮತ್ತು ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಆ.26ರಂದು ಬೆಂಗಳೂರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ.

ದೇಶದ 100 ನದಿಗಳಲ್ಲಿ ಅಸ್ಥಿ ವಿಸರ್ಜನೆ

ಇತ್ತೀಚೆಗೆ ನಿಧನ ಹೊಂದಿದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ಥಿಗಳನ್ನು ದೇಶದ ಎಲ್ಲ ಪ್ರಮುಖ ನದಿಗಳಲ್ಲಿ ವಿಸರ್ಜಿಸಲು ತೀರ್ಮಾನಿಸಲಾಗಿದೆ. ಸುಮಾರು 100 ನದಿಗಳಲ್ಲಿ ಅಟಲ್‌ ಅಸ್ಥಿಗಳು ವಿಸರ್ಜನೆಯಾಗಲಿವೆ.

ಈ ಸಂಬಂಧ ಬುಧವಾರ ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಟಲ್‌ಜಿ ಅಸ್ಥಿ ತುಂಬಿದ್ದ ಕಲಶಗಳನ್ನು ವಿತರಿಸಲಾಯಿತು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್‌ ಹಾಗೂ ರಾಜನಾಥ ಸಿಂಗ್‌ ಅವರು ರಾಜ್ಯಾಧ್ಯಕ್ಷರಿಗೆ ಅಸ್ಥಿಗಳನ್ನು ನೀಡಿದರು. ಈ ರಾಜ್ಯಾಧ್ಯಕ್ಷರು ತಮ್ಮ ತಮ್ಮ ರಾಜ್ಯಗಳಿಗೆ ಅಸ್ಥಿಗಳನ್ನು ಕೊಂಡೊಯ್ದು ಪ್ರಮುಖ ನದಿಗಳಲ್ಲಿ ಚಿತಾಭಸ್ಮ ವಿಸರ್ಜಿಸಲಿದ್ದಾರೆ. ಈ ನಿಮಿತ್ತ ಎಲ್ಲ ರಾಜ್ಯಗಳಲ್ಲಿ ಅಸ್ಥಿ ಕಲಶ ಯಾತ್ರೆಗಳು ನಡೆಯಲಿವೆ.

‘ಯಾತ್ರೆಯ ವೇಳೆ ಚಿತಾಭಸ್ಮಕ್ಕೆ ನಮನ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ’ ಎಂದು ಅಮಿತ್‌ ಶಾ ತಿಳಿಸಿದ್ದಾರೆ. ಕರ್ನಾಟಕದ ಪರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಶಾ ಅವರಿಂದ ಚಿತಾಭಸ್ಮ ಕಲಶ ಸ್ವೀಕರಿಸಿದರು.

Close

Follow Us:
Download App:
  • android
  • ios