ಬೆಂಗಳೂರು(ಜು.11): ಆಡಳಿತಾರೂಢ ಪಕ್ಷಗಳ ಶಾಸಕರ ಸರಣಿ ರಾಜೀನಾಮೆ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳ್ಳಬಹುದು ಎಂಬ ದಟ್ಟವದಂತಿಗಳ ನಡುವೆಯೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಸಚಿವ ಸಂಪುಟ ಸಭೆ ಕರೆದಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದ್ದು, ಸಭೆ ಕರೆಯುವ ಬಗ್ಗೆ ಬುಧವಾರ ಸಂಜೆ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ, ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂಬ ಮಾತು ಕೇಳಿಬರುತ್ತಿದೆ. ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಧಾನಸಭೆ ವಿಸರ್ಜನೆ ಮಾಡುವ ತೀರ್ಮಾನ ಕೈಗೊಳ್ಳಬಹುದು ಎಂಬ ವದಂತಿ ಒಂದು ಕಡೆ ಇದ್ದರೆ, ಇದು ಕೊನೆಯ ಸಂಪುಟ ಸಭೆ ಆಗಬಹುದು ಎಂಬ ಕಾರಣಕ್ಕಾಗಿ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೂ ಧನ್ಯವಾದ ಸಲ್ಲಿಸುವ ಸಂಬಂಧ ಸಭೆ ಕರೆದಿರಬಹುದು ಎನ್ನಲಾಗುತ್ತಿದೆ.

ಆದರೆ ಇದನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಮುಖ್ಯಮಂತ್ರಿಗಳ ಕಚೇರಿ ಮೂಲಗಳು, ಇದೊಂದು ಸಾಮಾನ್ಯ ಸಂಪುಟ ಸಭೆ. ಹಿಂದಿನ ಸಂಪುಟ ಸಭೆಗಳಂತೆ ಈ ಸಂಪುಟ ಸಭೆಯಲ್ಲೂ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ ಎಂದು ಸಮಜಾಯಿಷಿ ನೀಡಿವೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹತ್ವದ ಯೋಜನೆಗಳಿಗೆ ಸಂಪುಟದಲ್ಲಿ ಒಪ್ಪಿಗೆ?

ಸಮ್ಮಿಶ್ರ ಸರ್ಕಾರದ ಬುಡ ಅಲುಗಾಡುತ್ತಿರುವ ಮಧ್ಯೆಯೇ ಗುರುವಾರ ಕರೆದಿರುವ ಸಚಿವ ಸಂಪುಟ ಸಭೆಯಲ್ಲಿ ಸಹಸ್ರಾರು ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ತರಾತುರಿಯಲ್ಲಿ ಅನುಮೋದನೆ ಪಡೆಯುವ ಅನುಮಾನ ವ್ಯಕ್ತವಾಗಿದೆ.

ಬಹುತೇಕ ಇದು ಕೊನೆಯ ಸಚಿವ ಸಂಪುಟ ಸಭೆಯಾಗಬಹುದು ಎಂಬ ಲೆಕ್ಕಾಚಾರಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳು ಬಾಕಿ ಉಳಿದಿರುವ ಹಲವು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆಯುವ ಸನ್ನಾಹದಲ್ಲಿದೆ ಎಂದು ತಿಳಿದು ಬಂದಿದೆ.