ನವದೆಹಲಿ(ಆ.01): ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕ ಇರುವಾಗ, ರಾಷ್ಟ್ರ ರಾಜಧಾನಿ ನವದೆಹಲಿ ಜನತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ.

200 ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸುವ ಎಲ್ಲಾ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಅಲ್ಲದೇ 201 ರಿಂದ 400 ಯುನಿಟ್ ವಿದ್ಯುತ್ ಬಳಸುವವರಿಗೆ ಶೇ.50 ರಷ್ಟು ಸಹಾಯಧನ ನೀಡುವುದಾಗಿಯೂ ಹೇಳಿದ್ದಾರೆ.

ವಿದ್ಯುತ್ ಕಂಪನಿಗಳು ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವುದರಿಂದ ಮತ್ತು ಮೂಲಸೌಕರ್ಯಗಳು ಸುಧಾರಿಸಿರುವುದರಿಂದ ವಿದ್ಯುತ್ ದರದಲ್ಲಿ ಇಳಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

ಅಗ್ಗದ ದರದಲ್ಲಿ ದಿನದ 24 ಗಂಟೆಯೂ ರಾಷ್ಟ್ರ ರಾಜಧಾನಿ ನವದೆಹಲಿ ಜನೆತೆಗೆ ವಿದ್ಯುತ್ ನೀಡುತ್ತಿರುವುದು ಆಪ್ ಸರ್ಕಾರಕ್ಕೆ ಹೆಮ್ಮೆಯ ವಿಷಯ ಎಂದು ಕೇಜ್ರಿವಾಲ್ ನುಡಿದಿದ್ದಾರೆ.