ನವದೆಹಲಿ: ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ದೊರಕಿಸಲು ಹೋರಾಟ ಆರಂಭಿಸಿರುವ ಆಮ್‌ಆದ್ಮಿ ಪಕ್ಷದ ನಾಯಕ ಅರವಿಂದ್‌ ಕೇಜ್ರಿವಾಲ್‌, ಇದೀಗ ಕೇಂದ್ರದಲ್ಲಿ ಅಧಿಕಾರಾರೂಢ ಬಿಜೆಪಿ ಸರ್ಕಾರಕ್ಕೆ ಭರ್ಜರಿ ಆಫರ್‌ ನೀಡಿದ್ದಾರೆ. 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಿಜೆಪಿ ಪರ ಪ್ರಚಾರ ನಡೆಸಲಿದೆ ಎಂದು ಘೋಷಿಸಿದ್ದಾರೆ. ಅದಕ್ಕೆ ಅವರು ಇದಕ್ಕಾಗಿ ಒಂದು ಷರತ್ತು ಮುಂದಿಟ್ಟಿದ್ದಾರೆ. ಅದೇನೆಂದರೆ 2019ರ ಲೋಕಸಭಾ ಚುನಾವಣೆಗೂ ಮುನ್ನ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕು ಎಂಬುದು.

ಸೋಮವಾರ ವಿಧಾನಸಭೆಯಲ್ಲಿ ಪ್ರತ್ಯೇಕ ರಾಜ್ಯ ಬೇಡಿಕೆ ಕುರಿತು ಮಾತನಾಡಿದ ಕೇಜ್ರಿ, 2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವುದಾಗಿ ಮೋದಿ ಘೋಷಿಸಿದ್ದರು. ಆದರೆ ನಂತರದ ದಿನಗಳಲ್ಲಿ ಮೋದಿ ಅವರಿಗೆ ತಮ್ಮ ಭರವಸೆ ಮರೆತು ಹೋಯಿತು. ಆದರೆ ಈಗಲೂ ಕಾಲ ಮಿಂಚಿಲ್ಲ.

2019ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ, ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಲಿ. ನಾವು ಬಿಜೆಪಿ ಪರ ಪ್ರಚಾರಕ್ಕೆ ಸಿದ್ಧ. ಇಲ್ಲದೇ ಹೋದಲ್ಲಿ ಬಿಜೆಪಿ, ದೆಹಲಿ ಬಿಡಿ ಎಂಬ ಆಂದೋಲನ ಆರಂಭಿಸಲಿದ್ದೇವೆ ಎಂದು ಹೇಳಿದರು.