* ಕಾಶ್ಮೀರಕ್ಕೆ ಇನ್ನೂ ಹೆಚ್ಚು ಸ್ವಾಯತ್ತತೆ ಸಿಗಲಿ ಎಂದ ಪಿ.ಚಿದಂಬರಂ ಹೇಳಿಕೆಗೆ ಜೇಟ್ಲಿ ಆಕ್ಷೇಪ* ಚಿದಂಬರಂ ಹೇಳಿಕೆಯು ರಾಷ್ಟ್ರ ಹಿತಾಸಕ್ತಿಗೆ ಮಾರಕ: ಜೇಟ್ಲಿ ವಿಷಾದ* ಯುಪಿಎ ಸರಕಾರ ಕಾಶ್ಮೀರ ವಿಚಾರದಲ್ಲಿ 10 ವರ್ಷ ಹಾಳು ಮಾಡಿತು* ಕಾಂಗ್ರೆಸ್ ಕಲ್ಲುತೂರಾಟದ ಪ್ರತಿಭಟನಾಕಾರರನ್ನು ಬೆಳೆಸಿತೇ ಹೊರತು ಬೇರೇನೂ ಮಾಡಲಿಲ್ಲ: ಜೇಟ್ಲಿ* ಮೋದಿ ಸರಕಾರದ ಅವಧಿಯಲ್ಲಿ ಉಗ್ರರು ಉಸಿರುಗಟ್ಟುತ್ತಿದ್ದಾರೆ: ಜೇಟ್ಲಿ
ಮುಂಬೈ(ಅ. 30): ಜಮ್ಮು-ಕಾಶ್ಮೀರಕ್ಕೆ ಇನ್ನೂ ಹೆಚ್ಚಿನ ಸ್ವಾಯತ್ತ ಸ್ಥಾನಮಾನ ಸಿಗಬೇಕು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ನೀಡಿದ ಹೇಳಿಕೆಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಟೀಕಿಸಿದ್ದಾರೆ. ಕಾಂಗ್ರೆಸ್'ನ ಇಂತಹ ಧೋರಣೆಯೇ ಕಾಶ್ಮೀರದ ಇಂದಿನ ದುಸ್ಥಿತಿಗೆ ಕಾರಣವಾಗಿದೆ ಎಂದು ಜೇಟ್ಲಿ ವಿಷಾದಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಜನರು ಆಜಾದಿ ಬಗ್ಗೆ ಧ್ವನಿ ಎತ್ತುತ್ತಿದ್ದಾರೆಂದರೆ ತಮ್ಮ ರಾಜ್ಯಕ್ಕೆ ಹೆಚ್ಚಿನ ಸ್ವಾಯತ್ತ ಸ್ಥಾನವನ್ನು ಕೇಳುತ್ತಿದ್ದಾರೆಂದು ಅದರರ್ಥ ಎಂದು ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ನಿನ್ನೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅರುಣ್ ಜೇಟ್ಲಿ, ಕಾಂಗ್ರೆಸ್'ನ ಈ ನಿಲುವು ದೇಶದ ಹಿತಾಸಕ್ತಿಗೆ ಧಕ್ಕೆ ತರುವಂಥದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಿ.ಚಿದಂಬರಂ ಅವರು ನೀಡಿದ ಈ ಹೇಳಿಕೆಯು ಪಕ್ಷದ ಅಧಿಕೃತ ನಿಲುವೇ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದೂ ಜೇಟ್ಲಿ ಆಗ್ರಹಿಸಿದ್ದಾರೆ.
"1947ರಿಂದಲೂ ಕಾಂಗ್ರೆಸ್ ಅನುಸರಿಸಿಕೊಂಡು ಬಂದ ತಪ್ಪು ನೀತಿಯು ಕಾಶ್ಮೀರದ ಸಮಸ್ಯೆಗೆ ಕಾರಣವಾಗಿದೆ. ಕಾಶ್ಮೀರ ಬಿಕ್ಕಟ್ಟು ಕಾಂಗ್ರೆಸ್'ನ ಕೊಡುಗೆಯಾಗಿದೆ. ಹಿಂದೆ ಮಾಡಿದ ತಪ್ಪನ್ನು ಅರಿತು ಸರಿಪಡಿಸಿಕೊಳ್ಳುವ ಬದಲು ಕಾಂಗ್ರೆಸ್ ಈ ಬಿಕ್ಕಟ್ಟನ್ನು ಉಲ್ಬಣಿಸಲು ಮುಂದಾಗಿದೆ... ಕಾಂಗ್ರೆಸ್ ಪಕ್ಷವು ಇಡೀ ದೇಶವನ್ನು ವಂಚಿಸಿದೆ, ತನ್ನನ್ನೇ ವಂಚಿಸಿಕೊಳ್ಳುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತೆಯನ್ನು ಉತ್ತೇಜಿಸುತ್ತಿದೆ. ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ. ಇದು ತೀರಾ ಗಂಭೀರ ವಿಚಾರವಾಗಿದೆ," ಎಂದು ಜೇಟ್ಲಿ ಹೇಳಿದ್ದಾರೆ.
10 ವರ್ಷ ವೇಸ್ಟ್ ಮಾಡಿದ್ರು:
"ಹಿಂದಿನ 10 ವರ್ಷದ ಅವಧಿಯನ್ನು ಯುಪಿಎ ಸುಮ್ಮನೆ ಹಾಳುಮಾಡಿತು. ನೀವು ತೆಗೆದುಕೊಂಡ ಒಂದೇ ಒಂದು ಕ್ರಮವೂ ಪ್ರಯೋಜನಕ್ಕೆ ಬರಲಿಲ್ಲ. ಕಲ್ಲು ತೂರಾಟದ ಪ್ರತಿಭಟನೆಯಂತಹ ಸಾಮೂಹಿಕ ಸಮಾಜಘಾತುಕ ಶಕ್ತಿಗಳನ್ನು ಬೆಳೆಯಲು ಬಿಟ್ಟಿರಿ; ಭಯೋತ್ಪಾದನೆ ಮತ್ತು ಭಯೋತ್ಪಾದಕರು ಮೆರೆದಾಡಲು ಅವಕಾಶ ಕೊಟ್ಟಿರಿ; ಜನಜೀವನ ಅಸ್ತವ್ಯಸ್ತವಾಗುವಂತೆ ಮಾಡಿದಿರಿ," ಎಂದು ಕೇಂದ್ರ ವಿತ್ತ ಸಚಿವರು ಟೀಕಿಸಿದ್ದಾರೆ.
ಮೋದಿ ಸರಕಾರದಲ್ಲಿ ಉಗ್ರರ ದಮನ:
ಈಗಿನ ಮೋದಿ ಸರಕಾರದ ಅವಧಿಯಲ್ಲಿ ಉಗ್ರರನ್ನು ಸದೆಬಡಿಯಲು ಬಹಳ ಶ್ರಮ ವಹಿಸಲಾಗುತ್ತಿರುವುದನ್ನು ಜೇಟ್ಲಿ ಈ ವೇಳೆ ವಿವರಿಸಿದ್ದಾರೆ. "ಭಯೋತ್ಪಾದಕರಿಗೆ ಹೋಗುತ್ತಿದ್ದ ದೇಣಿಗೆಗಳ ಮೂಲಕ್ಕೆ ಕತ್ತರಿ ಹಾಕಲು ಯಶಸ್ವಿಯಾಗಿದ್ದೇವೆ. ಕಲ್ಲು ತೂರುವ ಪ್ರತಿಭಟನೆಗಳು ಹೆಚ್ಚೂಕಡಿಮೆ ನಿಂತಿವೆ. ಗ್ರಾಮ ಗ್ರಾಮಗಳಲ್ಲಿದ್ದ ಗುಪ್ತಚರ ಜಾಲಗಳನ್ನು ಮರಳಿ ಸಕ್ರಿಯಗೊಳಿಸಲಾಗಿದೆ. ಭಯೋತ್ಪಾದಕರು ಕಾಲು ಕೀಳುವ ಸನ್ನಿವೇಶ ಬಂದಿದೆ. ಭದ್ರತಾ ಪಡೆಗಳು ಪರಿಸ್ಥಿತಿಯ ನಿಯಂತ್ರಣ ಹೊಂದಿದ್ದಾರೆ," ಎಂದು ಅರುಣ್ ಜೇಟ್ಲಿ ಹೇಳಿಕೊಂಡಿದ್ದಾರೆ.
ಸಂವಿಧಾನದ 370ನೇ ಪರಿಚ್ಛೇದದಂತೆ ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನವಿದೆ. ಈಗೀಗ ಕಾಶ್ಮೀರದಲ್ಲಿ 'ಆಜಾದಿ' ಕೂಗು ಬಲಗೊಳ್ಳುತ್ತಿದೆ. ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ನಿಯೋಜಿಸಬಾರದು ಎಂಬುದು ಒಳಗೊಂಡಂತೆ ಪ್ರತ್ಯೇಕತಾವಾದಿಗಳು ಹಾಗೂ ಕೆಲ ಪಕ್ಷಗಳು ಅನೇಕ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ.
