ಕಿಡ್ನಿ ಕಸಿ ಯಶಸ್ಸಿನ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇಡೀ ಹಣಕಾಸು ಇಲಾಖೆಯಲ್ಲಿ ಅತೀ ಹೆಚ್ಚು ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. 

ನವದೆಹಲಿ (ಆ. 28): ಯಶಸ್ವಿ ಕಿಡ್ನಿ ಕಸಿ ನಂತರ ಅರುಣ್ ಜೇಟ್ಲಿ ನಾರ್ತ್ ಬ್ಲಾಕ್‌ನ ಹಣಕಾಸು ಇಲಾಖೆಗೆ ಮರಳಿದ್ದು, ಮುಂದಿನ ಒಂದು ತಿಂಗಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಚೇರಿಗೆ ಬರಲಿದ್ದು, ಮಧ್ಯಾಹ್ನದ ನಂತರ ಮನೆಯಿಂದಲೇ ಕೆಲಸ ಮಾಡುವವರಿದ್ದಾರೆ.

ಸೋಂಕಿನ ಭೀತಿಯಿಂದ ಯಾರ ಜೊತೆಗೂ ಕೈಕುಲುಕದಂತೆ, 5 ಫೀಟ್ ಅಂತರದಿಂದಲೇ ಮಾತನಾಡಿ ಕಳಿಸುವಂತೆ ವೈದ್ಯರು ಜೇಟ್ಲಿಗೆ ಸೂಚಿಸಿದ್ದಾರೆ. ಹೀಗಾಗಿ ಕಚೇರಿಗೆ ಬಂದ ಮೊದಲ ಸಭೆಯಲ್ಲಿ ಹಣಕಾಸು ಕಾರ್ಯದರ್ಶಿಗಳು ಕೂಡ ಜೇಟ್ಲಿ ಅವರಿಂದ ಬಹುದೂರ ಕುಳಿತೇ ಸಭೆ ನಡೆಸಬೇಕಾಯಿತು.

ತುಂಬಾ ದಿನಗಳ ನಂತರ ಅರುಣ್ ಜೇಟ್ಲಿ ಅವರನ್ನು ನೋಡಿದ ಪ್ರಧಾನಿ ಮೋದಿ ಕೈ ಕುಲುಕಲು ಬಂದಾಗ ಹತ್ತಿರ ಬರಬೇಡಿ ಎಂದು ಕೇಳಿಕೊಂಡ ಜೇಟ್ಲಿ ದೂರದಿಂದಲೇ ಕೈಮುಗಿದು ಕುಳಿತುಕೊಂಡರು. ಅಂದ ಹಾಗೆ ಇಡೀ ಹಣಕಾಸು ಇಲಾಖೆಯಲ್ಲಿ ಅತೀ ಹೆಚ್ಚು ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ