ಗುವಾಹಟಿ[ಸೆ.09]: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದರೂ, ಈಶಾನ್ಯ ರಾಜ್ಯಗಳಿಗೆ ವಿಶೇಷ ಸವಲತ್ತು ಒದಗಿಸುತ್ತಿರುವ 371ನೇ ವಿಧಿಯನ್ನು ಕೇಂದ್ರ ಸರ್ಕಾರ ಮುಟ್ಟುವುದಿಲ್ಲ ಎಂದು ಗೃಹ ಸಚಿವ ಅಮಿತ್‌ ಶಾ ಅವರು ಈಶಾನ್ಯ ರಾಜ್ಯಗಳ 8 ಮುಖ್ಯಮಂತ್ರಿಗಳ ಎದುರು ಘೋಷಣೆ ಮಾಡಿದ್ದಾರೆ. ಇದೇ ವೇಳೆ, ಈಶಾನ್ಯ ಭಾರತದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗ ಇರಲೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಈಶಾನ್ಯ ಮಂಡಳಿಯ 68ನೇ ಮಹಾಧಿವೇಶನ ಉದ್ಘಾಟಿಸಿ ಭಾನುವಾರ ಮಾತನಾಡಿದ ಅವರು, 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ 371ನೇ ವಿಧಿಯನ್ನು ಬರ್ಕಾಸ್ತು ಮಾಡಲಾಗುತ್ತದೆ ಎಂದು ತಪ್ಪು ಮಾಹಿತಿ ಹರಡುವ ಹಾಗೂ ಹಾದಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಅದೆಲ್ಲಾ ನಡೆಯುವುದಿಲ್ಲ ಎಂದು ಸಂಸತ್ತಿನಲ್ಲೇ ಸ್ಪಷ್ಟನೆ ನೀಡಿದ್ದೇನೆ. ಇಂದು 8 ಮುಖ್ಯಮಂತ್ರಿಗಳ ಸಮ್ಮುಖವೂ ಹೇಳುತ್ತಿದ್ದೆನೆ. 370 ಹಾಗೂ 371ನೇ ವಿಧಿ ಪ್ರತ್ಯೇಕವಾದುವು. ಹೀಗಾಗಿ 371ನೇ ವಿಧಿಯನ್ನು ಸರ್ಕಾರ ಮುಟ್ಟುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಕ್ರಮ ವಲಸಿಗರನ್ನು ಹೊರ ದಬ್ಬುತ್ತೇವೆ: ಅಸ್ಸಾಂನಲ್ಲಿ ಶಾ ಗುಡುಗು!

ಸಂವಿಧಾನರಚನಾ ಸಮಿತಿ 370ನೇ ವಿಧಿಯನ್ನು ರೂಪಿಸಿತ್ತು. ಅದೊಂದು ತಾತ್ಕಾಲಿಕ ಸೌಕರ್ಯ. ಆದರೆ 371ನೇ ವಿಧಿಯೇ ಬೇರೆ. ಎರಡರ ನಡುವೆಯೂ ಸಾಕಷ್ಟುವ್ಯತ್ಯಾಸವಿದೆ. 371 ಹಾಗೂ 371 (ಎ) ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರ ಗೌರವಿಸುತ್ತವೆ ಎಂದು ಹೇಳಿದರು.

ಏನಿದು 371?

ಬುಡಕಟ್ಟು ಸಂಸ್ಕೃತಿಯನ್ನು ರಕ್ಷಿಸುವ ಸಲುವಾಗಿ ಬಹುತೇಕ ಈಶಾನ್ಯ ರಾಜ್ಯಗಳಲ್ಲಿ 371ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ.