ವಿಧಾನಸಭೆ[]ಜು.23]: ಸಮ್ಮಿಶ್ರ ಸರ್ಕಾರವು ಇಂದು ಪತನದ ಅಂಚಿಗೆ ಬರಲು ಆಡಳಿತ ಪಕ್ಷದ ಲೋಪದೋಷಗಳು ಕಾರಣ. ಮೈತ್ರಿ ಧರ್ಮ ಪಾಲನೆಯಾಗದಿರುವುದು ಸೇರಿದಂತೆ ನಮ್ಮ ತಪ್ಪುಗಳು ಸರ್ಕಾರ ಅಸ್ಥಿರಗೊಳಿಸುವ ವಿರೋಧಪಕ್ಷದ ಪ್ರಯತ್ನಕ್ಕೆ ಸಹಕಾರಿಯಾಗಿವೆ ಎಂದು ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.

ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ ನಡುವೆ ಮೈತ್ರಿ ಧರ್ಮ ಪಾಲನೆ ಆಗುತ್ತಿಲ್ಲ. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಕಾಣುತ್ತಿಲ್ಲ. ಹೊಂದಾಣಿಕೆ ಇಲ್ಲದಿದ್ದಾಗ ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟು ವಿರೋಧ ಪಕ್ಷದಲ್ಲಿ ಕೂರೋಣ ಎಂದು ಲೋಕಸಭೆ ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದೆ. ನಮ್ಮ ತಪ್ಪುಗಳು ಸ್ವಲ್ಪ ಮಟ್ಟಿಗೆ ವಿರೋಧಪಕ್ಷಕ್ಕೆ ಸಹಕಾರಿಯಾಗಿದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒತ್ತುವರಿದಾರರ ಎಂಜಲು ತಿಂದಿದ್ದೇವೆಯೇ?:

ಬೆಳಗಾವಿ ಅಧಿವೇಶನದಲ್ಲಿ ಬಿ.ಎಂ. ಕಾವಲಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 310 ಎಕರೆ ಭೂಮಿಯನ್ನು ಪ್ರಭಾವಿಗಳಿಗೆ ಪರಭಾರೆ ಮಾಡಲಾಗಿದೆ ಎಂಬುದನ್ನು ಪ್ರಸ್ತಾಪ ಮಾಡಿದ್ದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದೆ. ಆದರೆ ಕಂದಾಯ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ. ನಾನು ಭರವಸೆಗಳ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಸ್ಥಳ ಪರಿಶೀಲನೆ ಮಾಡಿದ್ದೇನೆ. ಬಡವರು ಗುಡಿಸಲು ಹಾಕಿಕೊಳ್ಳಲು ಬಿಡದ ನಾವು ಖೋಡೇಸ್‌ ಕುಟುಂಬದ ಹಂಗಿನಲ್ಲಿದ್ದೇವೆಯೇ? ಅಥವಾ ಅವರ ಎಂಜಲು ತಿಂದಿದ್ದೇವೆಯೇ ಎಂದು ಪ್ರಶ್ನೆ ಮಾಡಿದರು.

ಸರ್ಕಾರವು ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಭರವಸೆಗಳ ಸಮಿತಿಗೂ ರಾಜೀನಾಮೆ ನೀಡಿದ್ದೇನೆ. ಬಿಜೆಪಿಯವರು ಏಕೆ ವಿರೋಧಪಕ್ಷವಾಗಿ ಈ ಬಗ್ಗೆ ಹೋರಾಟ ಮಾಡಲಿಲ್ಲ. ನೀವೂ ಕೂಡ ಇದರಲ್ಲಿ ಪಾಲುದಾರರೇ ಎಂಬ ಅನುಮಾನ ಮೂಡುತ್ತಿದೆ. ಇದು ಮಾತ್ರವಲ್ಲ ಐಎಂಎ, ಅಗ್ರಿಗೋಲ್ಡ್‌ ಪ್ರಕರಣ ಸೇರಿದಂತೆ ನೂರಾರು ಅಕ್ರಮ, ಭ್ರಷ್ಟಾಚಾರ ಪ್ರಕರಣ ನಡೆಯುತ್ತಿದ್ದರೂ ನಾವು ತುಟಿ ಬಿಚ್ಚುತ್ತಿಲ್ಲ. ಇಂತಹ ಮಾಫಿಯಾಗಳಿಗೆ ನಮ್ಮ ರಾಜ್ಯ ಸ್ವರ್ಗ ಆಗಿದೆಯೇ ಎಂಬಂತಾಗಿದೆ. ಆದರೂ ವಿರೋಧಪಕ್ಷಕ್ಕೆ ಅಧಿಕಾರದ ದಾಹವೇ ಹೆಚ್ಚಾಗಿದೆ ಎಂದು ದೂರಿದರು.

ಎಚ್‌ಡಿಕೆ-ಬಿಎಸ್‌ವೈ ಕಂಡು ದೇವರೂ ಹೆದರಿದ್ದಾರೆ:

ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಸೃಷ್ಟಿಯಾಗಿರುವ ಸಂದಿಗ್ಧ ಪರಿಸ್ಥಿತಿ ಬಗ್ಗೆ ವಿವರಿಸಿದ ಅವರು, ಬಿ.ಎಸ್‌. ಯಡಿಯೂರಪ್ಪ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರು ಇಬ್ಬರಿಗೂ ದೇವರು ಬಲಗಡೆ ಹೂವು ನೀಡಿದ್ದಾರಂತೆ. ನಾನು ಆಸ್ತಿಕನೂ ಅಲ್ಲ ನಾಸ್ತಿಕನೂ ಅಲ್ಲ. ಹೂವು ಹೆಚ್ಚಾಗಿಟ್ಟು ಹೇಗೆ ದಾರಿ ತಪ್ಪಿಸಿದ್ದಾರೆ ಎಂಬುದನ್ನು ನೀವೇ ನೋಡಿ. ಇವರಿಬ್ಬರ ನಡುವೆ ಇದೀಗ ಸೃಷ್ಟಿಯಾಗಿರುವ ಸನ್ನಿವೇಶದಿಂದ ದೇವರು ಕೂಡ ಹೆದರಿಕೊಂಡು ಹೋಗಿದ್ದಾನೆ ಎಂದು ಕಿಚಾಯಿಸಿದರು.

ಸೀರೆ ಎಳೆಯುವವರು ಹೆಚ್ಚಾಗಿದ್ದಾರೆ!

ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಅವರು ಮಾತಿನ ನಡುವೆ ಪ್ರಜಾಪ್ರಭುತ್ವವನ್ನು ದ್ರೌಪದಿಗೆ ಹೋಲಿಸಿ ಮಹಾಭಾರತದಲ್ಲಿ ದ್ರೌಪದಿಗೆ ಆಗಿರುವ ರೀತಿಯಲ್ಲಿ ಇದೀಗ ಪ್ರಜಾಪ್ರಭುತ್ವಕ್ಕೆ ವಸ್ತ್ರಾಪಹರಣ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು, ಮಹಾಭಾರತದಲ್ಲಿ ದ್ರೌಪದಿ ಸೀರೆ ಎಳೆಯುವವರು ಒಬ್ಬರೇ ಇದ್ದರು. ಕೃಷ್ಣನ ಬಳಿ ಸೀರೆ ಇತ್ತು, ರಕ್ಷಣೆಗೆ ಬಂದ. ಈಗ ಸೀರೆ ಎಳೆಯುವವರು ಜಾಸ್ತಿಯಾಗಿದ್ದಾರೆ. ಕೃಷ್ಣನ ಬಳಿಯೂ ಸೀರೆ ಸ್ಟಾಕ್‌ ಖಾಲಿಯಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.