ಏಪ್ರಿಲ್ ಮೊದಲ ವಾರದಲ್ಲಿ 13೦ ಅಭ್ಯರ್ಥಿಗಳ ಕೈ ಮೊದಲ ಪಟ್ಟಿ ? ಟಿಕೆಟ್‌ ತಪ್ಪುವ ಶಾಸಕರ ಕುಟುಂಬಸ್ಥರಿಗೆ ಟಿಕೆಟ್‌

First Published 25, Mar 2018, 7:31 AM IST
April First Week Congress First Candidates  List release
Highlights

ರಾಜ್ಯ ಕಾಂಗ್ರೆಸ್‌ ಚುನಾ​ವಣಾ ಸಮಿ​ತಿಯು ಇತ್ತೀ​ಚೆಗೆ ದೇವ​ನ​ಹ​ಳ್ಳಿ​ಯಲ್ಲಿ ಸಭೆ ಸೇರಿ ಹಾಲಿ ಶಾಸ​ಕರು ಇರದ ಕ್ಷೇತ್ರ​ಗ​ಳಿಗೆ ಪ್ಯಾನೆಲ್‌ ಸಿದ್ದ​ಪ​ಡಿ​ಸುವ ಪ್ರಯತ್ನ ನಡೆ​ಸಿ​ತ್ತು. ಆದರೆ, ತಮ್ಮ ಹಿಂಬಾ​ಲ​ಕ​ರಿಗೆ ಟಿಕೆಟ್‌ ಕೊಡಿ​ಸ​ಬೇಕು ಎಂಬ ಉಮೇ​ದಿಗೆ ಬಿದ್ದ ಹಿರಿಯ ನಾಯ​ಕರ ಧೋರಣೆಯಿಂದಾಗಿ ಹಲವು ಕ್ಷೇತ್ರ​ಗಳ ಹೆಸರು ಅಂತಿ​ಮ​ಗೊ​ಳಿ​ಸು​ವಾಗ ತೀವ್ರ ಮಾತಿನ ಚಕ​ಮ​ಕಿಯೂ ನಡೆ​ದಿತ್ತು.

ಬೆಂಗಳೂರು(ಮಾ.25): ಹೈಕ​ಮಾಂಡ್‌ ಆಣ​ತಿ​ಯಾ​ಗಿದೆ. ಹೀಗಾಗಿ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಮೇಲೆ ಸ್ಪರ್ಧಿ​ಸ​ಲಿ​ರುವ ಸುಮಾರು 100ಕ್ಕೂ ಹೆಚ್ಚು (ಬಹುಶಃ ಸುಮಾರು 130) ಅಭ್ಯ​ರ್ಥಿ​ಗಳ ಹೆಸ​ರನ್ನು ಒಳ​ಗೊಂಡ ಕಾಂಗ್ರೆಸ್‌ ಪ್ರಥಮ ಪಟ್ಟಿಏಪ್ರಿಲ್‌ ಮೊದಲ ವಾರ​ದಲ್ಲಿ ಪ್ರಕ​ಟ​ವಾ​ಗು​ವುದು ಬಹು​ತೇಕ ಖಚಿತ.

ಮೈಸೂರು ಭಾಗ​ದಲ್ಲಿ ಜನಾ​ಶೀ​ರ್ವಾದ ಯಾತ್ರೆ ಕೈಗೊಂಡಿ​ರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಾ.30ರೊಳಗೆ ಪ್ರಥಮ ಪಟ್ಟಿ​ಯನ್ನು ಆಖೈರುಗೊಳಿಸಿ ಹೈಕ​ಮಾಂಡ್‌ ಅವ​ಗಾ​ಹ​ನೆಗೆ ಕಳು​ಹಿ​ಸು​ವಂತೆ ಶನಿ​ವಾರ ರಾಜ್ಯ ಕಾಂಗ್ರೆಸ್‌ ನಾಯ​ಕ​ತ್ವಕ್ಕೆ ಕಟ್ಟಾಜ್ಞೆ ನೀಡಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿ​ವೆ.

ಈ ಹಿನ್ನೆ​ಲೆ​ಯಲ್ಲಿ ಮೊದಲ ಪಟ್ಟಿಗೆ ಅಭ್ಯ​ರ್ಥಿ​ಗಳ ಪಟ್ಟಿ​ಯನ್ನು ಆಖೈ​ರು​ಗೊ​ಳಿ​ಸಲು ಸೋಮ​ವಾ​ರ​ದಿಂದ ಮೂರು ದಿನ​ಗಳವ​ರೆಗೂ ದೇವ​ನ​ಹಳ್ಳಿ ಸಮೀ​ಪದ ರೆಸಾ​ರ್ಟ್‌​ನಲ್ಲಿ ಕಾಂಗ್ರೆಸ್‌ ಪಕ್ಷದ ರಾಜ್ಯ ಚುನಾ​ವಣಾ ಸಮಿತಿ ಸಭೆ ನಡೆ​ಯಲಿದೆ. ಈ ಸಭೆ​ಯಲ್ಲಿ ಹಾಲಿ ಶಾಸ​ಕರಿರುವ ಕ್ಷೇತ್ರ​ಗಳು ಸೇರಿ​ದಂತೆ ಸುಮಾರು 100ಕ್ಕೂ ಹೆಚ್ಚು (ಬ​ಹು​ತೇಕ 130) ಕ್ಷೇತ್ರ​ಗಳ ಅಭ್ಯ​ರ್ಥಿ​ಗಳ ಹೆಸ​ರನ್ನು ಅಂತಿ​ಮ​ಗೊ​ಳಿ​ಸುವ ಪ್ರಕ್ರಿಯೆ ನಡೆ​ಯ​ಲಿದೆ ಎಂದು ಮೂಲ​ಗಳು ತಿಳ​ಸಿ​ವೆ.

ರಾಜ್ಯ ಕಾಂಗ್ರೆಸ್‌ ಚುನಾ​ವಣಾ ಸಮಿ​ತಿಯು ಇತ್ತೀ​ಚೆಗೆ ದೇವ​ನ​ಹ​ಳ್ಳಿ​ಯಲ್ಲಿ ಸಭೆ ಸೇರಿ ಹಾಲಿ ಶಾಸ​ಕರು ಇರದ ಕ್ಷೇತ್ರ​ಗ​ಳಿಗೆ ಪ್ಯಾನೆಲ್‌ ಸಿದ್ದ​ಪ​ಡಿ​ಸುವ ಪ್ರಯತ್ನ ನಡೆ​ಸಿ​ತ್ತು. ಆದರೆ, ತಮ್ಮ ಹಿಂಬಾ​ಲ​ಕ​ರಿಗೆ ಟಿಕೆಟ್‌ ಕೊಡಿ​ಸ​ಬೇಕು ಎಂಬ ಉಮೇ​ದಿಗೆ ಬಿದ್ದ ಹಿರಿಯ ನಾಯ​ಕರ ಧೋರಣೆಯಿಂದಾಗಿ ಹಲವು ಕ್ಷೇತ್ರ​ಗಳ ಹೆಸರು ಅಂತಿ​ಮ​ಗೊ​ಳಿ​ಸು​ವಾಗ ತೀವ್ರ ಮಾತಿನ ಚಕ​ಮ​ಕಿಯೂ ನಡೆ​ದಿತ್ತು. ವಿಶೇ​ಷ​ವಾಗಿ ಲೋಕೋ​ಪ​ಯೋಗಿ ಸಚಿವ ಡಾ. ಎಚ್‌.ಸಿ. ಮಹ​ದೇ​ವಪ್ಪ ಹಾಗೂ ಹಿರಿಯ ನಾಯಕ ವೀರಪ್ಪ ಮೊಯ್ಲಿ ನಡುವೆ ವಾಕ್ಸ​ಮ​ರ ನಡೆ​ದಿತ್ತು. ಅಲ್ಲದೆ, ಡಿ.ಕೆ. ಶಿವ​ಕು​ಮಾರ್‌ ಹಾಗ ಮಹ​ದೇ​ವಪ್ಪ ನಡು​ವೆಯೂ ಮಾತಿನ ಚಕ​ಮತಿ ನಡೆ​ದಿ​ತ್ತು.

ಇದರ ಪರಿ​ಣಾ​ಮ​ವಾಗಿ ವೀರಪ್ಪ ಮೊಯ್ಲಿ ಅವರ ಅಕೌಂಟ್‌​ನಿಂದ ಲೋಕೋ​ಪ​ಯೋಗಿ ಸಚಿ​ವ​ರನ್ನು ಗುರಿ​ಯಾಗಿಸಿ ಮಾಡ​ಲಾದ ಟ್ವೀಟ್‌ ರಾಷ್ಟ್ರ ಮಟ್ಟ​ದಲ್ಲಿ ಸಾಕಷ್ಟುಸುದ್ದಿಯೂ ಮಾಡಿ ಪಕ್ಷಕ್ಕೆ ಮುಜು​ಗರ ತಂದಿ​ತ್ತು.

ಟಿಕೆಟ್‌ ತಪ್ಪುವ ಶಾಸ​ಕರ ಕುಟುಂಬ​ಸ್ಥ​ರಿಗೆ ಟಿಕೆ​ಟ್‌?

ಸೋಮ​ವಾ​ರ​ದಿಂದ ಆರಂಭ​ವಾ​ಗುವ ಚುನಾ​ವಣಾ ಸಮಿತಿ ಸಭೆ​ಯಲ್ಲೂ ಹಿರಿಯ ಮುಖಂಡರ ನಡುವೆ ದೊಡ್ಡ ಮಟ್ಟ​ದಲ್ಲಿ ಕಾಣಿ​ಸಿ​ಕೊ​ಳ್ಳುವ ಸಾಧ್ಯ​ತೆ ಹೆಚ್ಚಿದೆ. ಏಕೆಂದರೆ, ಹಾಲಿ ಇರುವ ಎಲ್ಲಾ ಕಾಂಗ್ರೆ​ಸ್ಸಿ​ಗ​ರಿಗೆ ಟಿಕೆಟ್‌ ನೀಡ​ಬೇಕು ಎಂದು ಇದು​ವ​ರೆಗೂ ತೀರ್ಮಾ​ನ​ವಾ​ಗಿಲ್ಲ. ಕೆಲ ಹಿರಿಯ ನಾಯ​ಕರು ಹಾಲಿ ಶಾಸ​ಕರ ತಂಟೆಗೆ ಹೋಗು​ವುದು ಬೇಡ. ಅವ​ರಿಗೆ ಟಿಕೆಟ್‌ ನೀಡೋಣ ಎಂದು ವಾದಿ​ಸು​ತ್ತಿ​ದ್ದಾರೆ. ಆದರೆ, ಅನಾ​ರೋಗ್ಯ ಪೀಡಿ​ತರು ಹಾಗೂ ಕ್ಷೇತ್ರ​ದಲ್ಲಿ ತೀವ್ರ ವಿರೋಧ ಹೊಂದಿ​ರುವ ಕೆಲ ಶಾಸ​ಕರ ಟಿಕೆಟ್‌ ನೀಡ​ಬಾ​ರದು ಎಂಬ ಒತ್ತ​ಡವೂ ಇದೆ. ಮೂಲ​ಗಳ ಪ್ರಕಾರ ಅನಾ​ರೋಗ್ಯದಿಂದ ನರ​ಳು​ತ್ತಿ​ರುವ ಹಾಗೂ ತೀರಾ ವಯ​ಸ್ಸಾದ ಸುಮಾರು 10 ರಿಂದ 15 ಮಂದಿ ಹಾಲಿ ಶಾಸ​ಕ​ರಿಗೆ ಟಿಕೆಟ್‌ ತಪ್ಪುವ ಸಾಧ್ಯ​ತೆ​ಯಿ​ದೆ.

ಹೀಗಾ​ದಾಗ ಹಾಲಿ ಶಾಸ​ಕರು ಪಕ್ಷದ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಹೆಚ್ಚಿ​ರು​ವು​ದ​ರಿಂದ ಇಂತಹ ಶಾಸ​ಕರು ಯಾರಿಗೆ ಸೂಚಿ​ಸು​ತ್ತಾರೋ ಅವ​ರಿಗೆ ಟಿಕೆಟ್‌ ಕೊಡ​ಬೇಕು ಎಂಬ ವಾದ ಹುಟ್ಟಿ​ಕೊಂಡಿದೆ. ಹೀಗಾಗಿ ಟಿಕೆಟ್‌ ತಪ್ಪುವ ಶಾಸ​ಕರ ಪತ್ನಿ, ಪುತ್ರ ಅಥವಾ ಸಹೋ​ದ​ರ​ರಿಗೆ ಟಿಕೆಟ್‌ ನೀಡುವ ಮೂಲಕ ಬಂಡಾಯ ಹುಟ್ಟಿ​ಕೊ​ಳ್ಳ​ದಂತೆ ತಡೆ​ಯುವ ಸಾಧ್ಯ​ತೆಯೂ ಇದೆ ಎನ್ನ​ಲಾ​ಗು​ತ್ತಿ​ದೆ.

5000 ಅಂತ​ರ​ದಲ್ಲಿ ಸೋಲುಂಡ​ವ​ರಿಗೂ ಟಿಕೆ​ಟ್‌?

ಅದೇ ರೀತಿ ಕಳೆದ ಚುನಾ​ವ​ಣೆ​ಯಲ್ಲಿ ಕಡಿಮೆ ಅಂತ​ರ​ದಲ್ಲಿ ಅಂದರೆ ಸುಮಾರು 5 ಸಾವಿರ ಮತ​ಗಳ ಅಂತ​ರ​ದಲ್ಲಿ ಸೋಲುಂಡವರಿಗೂ ಈ ಬಾರಿ ನೇರ​ವಾಗಿ ಪಕ್ಷದ ಟಿಕೆಟ್‌ ನೀಡಬೇಕು ಎಂಬ ವಾದ​ವಿದೆ. ಆದರೆ, ಇಂತಹ ಕ್ಷೇತ್ರ​ಗ​ಳಲ್ಲಿ ಕಾಂಗ್ರೆಸ್‌ ಗೆಲು​ವಿನ ಸಾಧ್ಯತೆ ಈ ಬಾರಿ ಹೆಚ್ಚಿದೆ ಎಂದು ಕಾಂಗ್ರೆಸ್‌ ನಾಯ​ಕತ್ವ ನಡೆ​ಸಿದ ಸಮೀ​ಕ್ಷೆಯ ವರದಿ ಬಂದಿ​ದೆ. ಹೀಗಾಗಿ ಇಂತಹ ಕ್ಷೇತ್ರ​ಗ​ಳಲ್ಲಿ ಹಿರಿಯ ನಾಯ​ಕರ ಹಿಂಬಾ​ಲ​ಕರು ಟಿಕೆ​ಟ್‌​ಗಾಗಿ ಲಾಬಿ ನಡೆ​ಸಿ​ದ್ದಾರೆ. ಆದ್ದ​ರಿಂದ ಈ ವಿಚಾ​ರವೂ ಸೋಮ​ವಾ​ರ​ದಿಂದ ಆರಂಭ​ವಾ​ಗುವ ಸಭೆ​ಯಲ್ಲಿ ಕಿಚ್ಚು ಹಚ್ಚುವ ಸಾಧ್ಯತೆ ಇದೆ ಎನ್ನ​ಲಾ​ಗು​ತ್ತಿ​ದೆ.

ತಂದೆ-ಮಕ್ಕಳ ಬೇಡಿಕೆ ಹೈಕ​ಮಾಂಡ್‌ ಹೊಣೆ​ಗೆ

ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಹಂಚಿ​ಕೆ​ಯ​ಲ್ಲಿ ಕಾಂಗ್ರೆಸ್‌ ಪಾಲಿಗೆ ಕಬ್ಬಿ​ಣದ ಕಡ​ಲೆ​ಯಾ​ಗಿ​ರು​ವುದು ದೊಡ್ಡ ಸಂಖ್ಯೆ​ಯಲ್ಲಿ ಹಿರಿಯ ನಾಯ​ಕರು ಹಾಗೂ ಅವರ ಪುತ್ರ​ರಿಗೆ ಟಿಕೆಟ್‌ ನೀಡುವ ವಿಚಾರ. ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವ​ರಿಂದ ಆರಂಭ​ಗೊಂಡು ಲೈಂಗಿಕ ಹಗ​ರ​ಣ​ದಲ್ಲಿ ಸಿಲು​ಕಿ​ಕೊಂಡ ಎಚ್‌.ವೈ. ಮೇಟಿಯವರ ವರೆಗೆ ಹಲ​ವರು ತಮಗೂ ಹಾಗೂ ತಮ್ಮ ಕರುಳ ಕುಡಿ​ಗ​ಳಿಗೂ ಟಿಕೆಟ್‌ ಕೇಳು​ತ್ತಿ​ದ್ದಾರೆ. ಹಾಗಂತ ಕೇಳಿದ ಎಲ್ಲ​ರಿಗೂ ಟಿಕೆಟ್‌ ನೀಡಲು ಸಾಧ್ಯ​ವಿಲ್ಲ. ಒಬ್ಬ​ರಿಗೆ ನೀಡಿ, ಮತ್ತೊ​ಬ್ಬ​ರಿಗೆ ಟಿಕೆಟ್‌ ತಪ್ಪಿ​ಸಿ​ದರೆ ಅವರು ಬಂಡೆ​ಳುವ ಸಂಭ​ವವೇ ಹೆಚ್ಚು. ಹೀಗಾಗಿ ಈ ವಿಚಾ​ರ​ವನ್ನು ಸಂಪೂ​ರ್ಣ​ವಾಗಿ ಹೈಕ​ಮಾಂಡ್‌ ನಿರ್ಧಾ​ರಕ್ಕೆ ಬಿಡಲು ತೀರ್ಮಾ​ನಿ​ಸ​ಲಾ​ಗಿದೆ ಎಂದು ಮೂಲ​ಗಳು ಹೇಳು​ತ್ತವೆ.

ಒಟ್ಟಿ​ನಲ್ಲಿ ಮೊದಲ ಹಂತ​ದಲ್ಲಿ ತೀರಾ ಪೈಪೋ​ಟಿ​ಯಿ​ರುವ ಕ್ಷೇತ್ರ​ಗ​ಳನ್ನು ಹೊರ​ತು​ಪ​ಡಿಸಿ ಯಾವುದೇ ಗೊಂದ​ಲ​ವಿ​ಲ್ಲದ ಕ್ಷೇತ್ರ​ಗಳ ಅಭ್ಯರ್ಥಿ ಹೆಸರು ಘೋಷ​ಣೆ​ಯಾ​ಗುವ ಸಾಧ್ಯತೆ ಹೆಚ್ಚಿ​ದೆ.

loader