Asianet Suvarna News Asianet Suvarna News

ಎಂಟು ವಿಧೇಯಕಗಳಿಗೆ ವಿಧಾನಸಭೆ ಅಂಗೀಕಾರ

ಶಾಸನ ರಚನೆ ಕುರಿತು ನಡೆದ ಚರ್ಚೆಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಂಡಿ ಸಿದ ಕರ್ನಾಟಕ ರಾಜ್ಯ ವಿವಿಗಳ (ತಿದ್ದುಪಡಿ) ವಿಧೇಯಕ-2016ರ ಮೇಲೆ ನಡೆದ ಚರ್ಚೆಗೆ ಪಕ್ಷಾತೀತವಾಗಿ ಎಲ್ಲರೂ ಸಹಮತ ವ್ಯಕ್ತಪಡಿಸಿದರು.

approval of 8 bills by karnataka assembly
  • Facebook
  • Twitter
  • Whatsapp

ಸುವರ್ಣ ವಿಧಾನಸೌಧ, ಬೆಳಗಾವಿ: ಪರಿಸರ ಮತ್ತು ಅಂತರ್ಜಲಕ್ಕೆ ಮಾರಕವಾಗುವ ಅಕೇಶಿಯಾ, ನೀಲಗಿರಿ ಮೊದಲಾದ ಮರಗಳನ್ನು ನಿಷೇಧಿಸುವ ಮರಗಳ ಸಂರಕ್ಷಣೆ ವಿಧೇಯಕ ಸೇರಿದಂತೆ ಒಟ್ಟು 8 ವಿಧೇಯಕಗಳನ್ನು ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. 

ಮರಗಳ ವಿಧೇಯಕದಲ್ಲಿ ಕೇವಲ ಖಾಸಗಿ ಭೂಮಿ ಎನ್ನುವುದು ಮಾತ್ರ ಇದೆ. ಅರಣ್ಯ ಇಲಾಖೆ ನೆಟ್ಟಿರುವ ಮತ್ತು ಮುಂದೆ ನೆಡುವ ಸಸಿಗಳ ಮೇಲೂ ನಿಷೇಧ ಹೇರಬೇಕು. ಜತೆಗೆ ಯಾವ್ಯಾವ ಪ್ರಭೇದಗಳನ್ನು ನಿಷೇಧಿಸಲಾಗಿದೆ ಎಂಬ ಪಟ್ಟಿಯನ್ನೂ ಸೇರಿಸಿ ತಿದ್ದುಪಡಿ ಮಾಡುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದವು.

ಕೆಲವು ಮರಗಳು ನುಸಿ, ಕೀಟ ಹರಡುವುದನ್ನು ತಡೆಯುವ ಅಥವಾ ಪರಿಸರಕ್ಕೆ ಮಾರಕವಾಗುವುದನ್ನು ತಪ್ಪಿಸಲು ಈ ವಿಧೇಯಕ ಮಂಡಿಸುತ್ತಿರುವುದಾಗಿ ವಿಧೇಯಕ ಮಂಡಿಸಿದ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ ಅಕೇಶಿಯಾ, ನೀಲಗಿರಿಗಳನ್ನು ಅರಣ್ಯ ಇಲಾಖೆಯೂ ನೆಡುತ್ತಿದೆ. ಇದಕ್ಕೆ ಯಾರು ಜವಾಬ್ದಾರಿ. ಅರಣ್ಯ ಇಲಾಖೆಯೂ ಸೇರಿದಂತೆ ಸಮಗ್ರ ನಿಷೇಧ ಜಾರಿ ಆಗಬೇಕು ಎಂದರು. ನೀವೇ ಈ ಎಲ್ಲ ಸಸಿ ನೆಟ್ಟು ಹಾಳು ಮಾಡಿದ್ದೀರೆಂದು ಬಿಜೆಪಿಯ ಬೋಪಯ್ಯ ಹೇಳಿದರು. ಕೊನೆಗೆ ಅರಣ್ಯ ಇಲಾಖೆಯೂ ಸೇರಿ ಎಲ್ಲ ಪ್ರದೇಶ ದಲ್ಲೂ ನಿಷೇಧ ಹೇರುವುದಾಗಿ ಭರವಸೆ ನೀಡಿದ ಬಳಿಕ ವಿಧೇಯಕ ಅಂಗೀಕಾರಗೊಂಡಿತು. 

ಸಹಕಾರ ಸಚಿವ ಮಹದೇವಪ್ರಸಾದ್‌ ಕರ್ನಾಟಕ ಸಹಕಾರ ಸಂಘಗಳ 2ನೇ ತಿದ್ದುಪಡಿ ವಿಧೇಯಕದ ಜತೆಗೆ ಕರ್ನಾಟಕ ಸೌಹಾರ್ದ ಸಹಕಾರಿ 2ನೇ ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆದರು. ಕೃಷಿ ಸಚಿವ ಕೃಷ್ಣ ಭೈರೇಗೌಡ ಅರಣ್ಯ ಅ​ಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ವಿಧೇಯಕ 2015 ಅನ್ನು ವಾಪಸ್‌ ಪಡೆದು 2016ನೇ ವಿಧೇಯಕ ಮಂಡಿಸಿ ಅನುಮೋದನೆ ಪಡೆದರು. ನೀರಾ ಇಳಿಸಲು ಅನುವು ಮಾಡಿಕೊಡುವ ಕರ್ನಾಟಕ ಅಬಕಾರಿ ತಿದ್ದುಪಡಿಗೆ ಅಬಕಾರಿ ಸಚಿವ ಎಚ್‌.ವೈ.ಮೇಟಿ ಸದನದ ಅನುಮೋದನೆ ಪಡೆದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಂಡಿಸಿದ ಬೆಂಗಳೂರು ನೀರು ಸರಬರಜು ಮಂಡಳಿಗೆ 10 ಕೋಟಿ ರೂ.ಗಳಷ್ಟು ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿ​ಕಾರವನ್ನು ನೀಡುವ ಮತ್ತು 10 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಳ್ಳಬೇಕಾದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ತಿದ್ದುಪಡಿ ವಿಧೇಯಕಕ್ಕೆ ಸದನ ಅನುಮೋದನೆ ನೀಡಿತು. ಆರೋಗ್ಯ ಸಚಿವ ಕೆ.ಆರ್‌.ರಮೇಶ್‌'ಕುಮಾರ್‌ ಮಂಡಿಸಿದ ಕರ್ನಾಟಕ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಐಒಗ ವೈದ್ಯ ವೃತ್ತಿ ನಿರತರ ನೋಂದಣಿ ಮತ್ತು ವೈದ್ಯಕೀಯ ವೃತ್ತಿನಿರತರ(ತಿದ್ದುಪಡಿ) ವಿಧೇಯಕದ ಜತೆಗೆ ಕರ್ನಾಟಕ ಜೀವರಕ್ಷಕ ವಿಧೇಯಕ ಮತ್ತು ವೈದ್ಯಕೀಯ ವೃತ್ತಿನಿರತರ ವಿಧೇಯಕಕ್ಕೆ ವಿಪಕ್ಷಗಳ ಶ್ಲಾಘನೆಯೊಂದಿಗೆ ಅಂಗೀಕಾರ ದೊರೆಯಿತು.

ಅಕ್ಕಮಹಾದೇವಿ ವಿವಿ ವಿಧೇಯಕ ಮಂಡನೆ:
ವಿಧಾನ ಪರಿಷತ್‌: ವಿಜಯಪುರದ ಮಹಿಳಾ ವಿವಿ ಹೆಸರನ್ನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಿ ವಿಧಾನ ಪರಿಷತ್ತಿನಲ್ಲಿ ಗುರುವಾರ ವಿಧೇ​ಯಕವನ್ನು ಅಂಗೀಕರಿಸಲಾಯಿತು. ಶಾಸನ ರಚನೆ ಕುರಿತು ನಡೆದ ಚರ್ಚೆಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಂಡಿಸಿದ ಕರ್ನಾಟಕ ರಾಜ್ಯ ವಿವಿಗಳ(ತಿದ್ದುಪಡಿ) ವಿಧೇಯಕ-2016ರ ಮೇಲೆ ನಡೆದ ಚರ್ಚೆಗೆ ಪಕ್ಷಾತೀತ ವಾಗಿ ಎಲ್ಲರೂ ಸಹಮತ ವ್ಯಕ್ತಪಡಿಸಿದರು.

(epaper.kannadaprabha.in)

Follow Us:
Download App:
  • android
  • ios