ನವದೆಹಲಿ (ನ.17): ಬಿಜೆಪಿ ಕ್ರಮವನ್ನು ಪ್ರಶ್ನಿಸಿದವರೆಲ್ಲರನ್ನೂ ಒಂದೋ ದೇಶವಿರೋಧಿ ಅಥವಾ ಪಾಕಿಸ್ತಾನಿ ಎಂದು ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಗುಲಾಮ್ ನಬೀ ಆಝಾದ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರವನ್ನು ಮುಂದುವರೆಸಿದ ಆಝಾದ್, ದೇಶದ ಇತಿಹಾಸದಲ್ಲಿ ಹಿಂದೆಂದೂ ಅನುಭವಿಸದಷ್ಟು ಕಷ್ಟವನ್ನು ಜನರು ಸರ್ಕಾರದ ಹೊಸ ಘೋಷಣೆಯಿಂದಾಗಿ ಈಗ ಅನುಭವಿಸುತ್ತಿದ್ದಾರೆ, ಎಂದಿದ್ದಾರೆ.

ಕಾಳಧನ ವಿರುದ್ಧದ ಸಮರದಲ್ಲಿ ನಾವು ಸರ್ಕಾರವನ್ನು ಬೆಂಬಲಿಸುತ್ತೇವೆ. ವಿದೇಶಗಳಲ್ಲಿ ಶೇಖರಿಸಿಡಲಾದ ಕಾಳಧನವನ್ನು ಮೊದಲು ಹಿಂದೆ ತರಲಿ. ವಿದೇಶದ ಬ್ಯಾಂಕುಗಳಲ್ಲಿ ಸಂಗ್ರಹಿಸಲಾಗಿರುವ ಕಪ್ಪುಹಣವನ್ನುಹಿಂದೆ ತರುವುದಾಗಿಯೂ, ದೇಶದ ಪ್ರತಿಯೊಬ್ಬನಿಗೂ 15 ಲಕ್ಷ ನೀಡುವುದಾಗಿಯೂ ಪ್ರಧಾನಿ ಆಶ್ವಾಸನೆಯಿತ್ತಿದ್ದರು. ಆದರೆ ಈವರೆಗೆ ಒಂದು ಪೈಸೆಯನ್ನೂ ಕೂಡಾ ತಂದಿಲ್ಲ, ಎಂದೂ ಆಝಾದ್ ಟೀಕಿಸಿದ್ದಾರೆ.

ಕಪ್ಪುಹಣದ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಪ್ರಶ್ನಿಸಲಾಗುತ್ತದೆ ಎಂಬುವುದನ್ನು ಅರಿತು ಇಂತಹ ಕ್ರಮವನ್ನು ತುರ್ತಾಗಿ ತೆಗೆದುಕೊಂಡಿದ್ದಾರೆಂದು ಆಝಾದ್ ಹೇಳಿದ್ದಾರೆ.