ಅನುರಾಗ್‌ ತಿವಾರಿ ಸಾವು ಮೊದಲು ಹೃದಯಾಘಾತದಿಂದ ಸಂಭವಿಸಿದೆ ಎನ್ನುವ ಮಾಹಿತಿ ಬಂದಿತ್ತು. ಆನಂತರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಈಗ ಮರಣೋತ್ತರ ವರದಿಯಲ್ಲಿರುವ ಅಂಶಗಳನ್ನು ಗಮನಿಸಿದ ಮೇಲೆ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಎಸ್‌ಐಟಿ ಅಧಿಕಾರಿಗಳು ತಿವಾರಿ ಅವರಿಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿಯ ಬೆನ್ನುಹತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು(ಮೇ 22): ಆಹಾರ ಇಲಾಖೆ ಆಯುಕ್ತರಾಗಿದ್ದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಮಾಹಿತಿಗಳು ಪತ್ತೆ ಯಾಗಿದ್ದು, ಇದೊಂದು ಹತ್ಯೆ ಪ್ರಕರಣ ಆಗಿರಬಹುದು ಎಂಬ ಅನುಮಾನಕ್ಕೆ ಪುಷ್ಟಿನೀಡುವಂತಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಆಸ್ಪತ್ರೆ ವೈದ್ಯರು ಅವರ ಮರಣೋತ್ತರ ವರದಿಯ ಪ್ರಾಥಮಿಕ ವರದಿ ನೀಡಿದ್ದು, ಅದರಲ್ಲಿ ಅನುರಾಗ್‌ ತಿವಾರಿ ಸತ್ತಿರುವುದು ಬೆಳಗ್ಗೆ ಅಲ್ಲ, ರಾತ್ರಿ 1ರಿಂದ 2 ಗಂಟೆ ಸಮಯದಲ್ಲಿ ಎನ್ನುವ ಅಂಶವಿದೆ. ಅಷ್ಟೇ ಅಲ್ಲ, ಮೃತ ದೇಹದ ಮೇಲೆ ಗಾಯವೂ ಇದೆ ಎನ್ನುವ ಉಲ್ಲೇಖವಿದೆ. ಹಾಗಿದ್ದರೆ ಅದು ಯಾವ ರೀತಿಯ ಗಾಯ ಎನ್ನುವ ಪ್ರಶ್ನೆಗಳು ಈಗ ಎದ್ದಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಅನುರಾಗ್‌ ತಿವಾರಿ ತಮಗೆ ಜೀವ ಬೆದರಿಕೆ ಇತ್ತು ಎನ್ನುವ ಆತಂತಕಕಾರಿ ವಿಚಾರಗಳನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡಿದ್ದರು. ಇದನ್ನು ಅನುರಾಗ್‌ ಸಹೋದರ ಮಾಯಾಂಕ್‌ ತನ್ನ ಸ್ನೇಹಿತನಿಗೆ ಹೇಳಿದ್ದ ಎನ್ನಲಾಗಿದೆ. ಹಾಗೆಯೇ ಎರಡು ತಿಂಗಳ ಹಿಂದೆ ಅನುರಾಗ್‌ ಅವರು, ಬೆಂಗಳೂರಿನ ಪರಿಸ್ಥಿತಿ ಸರಿಯಾಗಿಲ್ಲ. ಇಲ್ಲಿನ ರಾಜಕೀಯ ಮತ್ತು ಅಧಿಕಾರ ಶಾಹಿ ವ್ಯವಸ್ಥೆ ಬೇಸರ ತರಿಸಿದೆ ಎಂದು ಸಹೋದರ ನೊಂದಿಗೆ ನೋವು ತೋಡಿಕೊಂಡಿದ್ದರು.

ಇದಕ್ಕೆ ಸಂಬಂಧಿಸಿದಂತೆ ಮಹ್ವತದ ಮಾಹಿತಿಗಳು ‘ಕನ್ನಡಪ್ರಭ' ಮತ್ತು ‘ಸುವರ್ಣ ನ್ಯೂಸ್‌'ಗೆ ಲಭ್ಯವಾಗಿವೆ. ಈ ಎಲ್ಲ ಮಾಹಿತಿಗಳನ್ನು ಗಮನಿಸಿದರೆ, ಅನುರಾಗ್‌ ತಿವಾರಿ ಅವರು ರಾತ್ರಿ 9 ಗಂಟೆ ವೇಳೆ ಊಟ ಮಾಡಿ ಹೊರಬಂದವರು ಮಧ್ಯರಾತ್ರಿ 2 ಗಂಟೆ ಸಮಯಕ್ಕೆ ಹೇಗೆ ಸಾವನ್ನಪ್ಪುತ್ತಾರೆ? ಊಟದಲ್ಲಿ ವಿಷ ಮಿಶ್ರಣ ಮಾಡಲಾಗಿತ್ತೆ? ಅದರಲ್ಲೂ ಒಬ್ಬ ಐಎಎಸ್‌ ಅಧಿಕಾರಿ ಬೆಳಗ್ಗೆ 6 ಗಂಟೆ ಸಮಯಕ್ಕೆ ರಸ್ತೆ ಬದಿ ಅನಾಥ ಶವವಾಗಿ ಬಿದ್ದಿರುತ್ತಾರೆ ಎನ್ನುವುದಾದರೆ ಹಿಂದೆ ಏನೆಲ್ಲಾ ನಡೆದಿರಬಹುದು? ಅಂದರೆ, ಇದು ನಿಜಕ್ಕೂ ಸಹಜ ಸಾವೇ ಅಥವಾ ಕೊಲೆಯೇ ಎನ್ನುವ ಅನುಮಾನಗಳು ಇನ್ನಷ್ಟುಹೆಚ್ಚಾಗುತ್ತಿವೆ.

ವೈದ್ಯಕೀಯ ವರದಿಯಲ್ಲಿ ಏನಿದೆ?: ಅನುರಾಗ್‌ ತಿವಾರಿ ಸಾವು ಮೊದಲು ಹೃದಯಾಘಾತದಿಂದ ಸಂಭವಿಸಿದೆ ಎನ್ನುವ ಮಾಹಿತಿ ಬಂದಿತ್ತು. ಆನಂತರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಈಗ ಮರಣೋತ್ತರ ವರದಿಯಲ್ಲಿರುವ ಅಂಶಗಳನ್ನು ಗಮನಿಸಿದ ಮೇಲೆ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಎಸ್‌ಐಟಿ ಅಧಿಕಾರಿಗಳು ತಿವಾರಿ ಅವರಿಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿಯ ಬೆನ್ನುಹತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮರಣೋತ್ತರ ವರದಿಯ ಪ್ರಕಾರ, ಮೃತ ತಿವಾರಿ ಹೊಟ್ಟೆಯಲ್ಲಿ ಪಚನವಾಗದೇ ಉಳಿದ ಅರೆಬರೆ ಆಹಾರವಿದೆ. ತಿವಾರಿ ರಾತ್ರಿ 1 ರಿಂದ 2 ಗಂಟೆ ಸಮಯದಲ್ಲಿ ತೀರಿಕೊಂಡಿದ್ದಾರೆ ಎನ್ನುವ ಲೆಕ್ಕಾಚಾರವೂ ಇದೆ. ಇದನ್ನು ನೋಡಿದರೆ ವಿಷ ಪ್ರಾಶನ ಮಾಡಿಸಿ ಕೊಲೆ ಮಾಡಿಸಲಾಗಿದೆಯಾ ಎನ್ನುವ ಶಂಕೆ ಮೂಡುತ್ತದೆ. ಇದಲ್ಲದೆ ವರದಿಯಲ್ಲಿ ಎಸ್ಪಿಕ್ಸಿಯಾ ಎನ್ನುವ ಪದ ಬಳಸಲಾಗಿದೆ. ಎಸ್ಪಿಕ್ಸಿಯಾ ಅಂದರೆ ಪಲ್ಸ್‌ ಇಲ್ಲದಿರುವುದು, ಉಸಿರುಕಟ್ಟಿರು ವುದು. ಇದೇ ವೇಳೆ, ಅವರ ದೇಹದ ಮೇಲೆ ಗಾಯಗಳಿದ್ದವು ಎನ್ನುವ ಅಂಶಗಳಿವೆ.

ತಿವಾರಿ ಮೃತಪಟ್ಟನಂತರ ಅವರ ದೇಹ ಪರೀಕ್ಷೆ ನಡೆಸಿದ್ದ ವೈದ್ಯರ ತಂಡ ಹೊಟ್ಟೆಯಲ್ಲಿದ್ದ ಆಹಾರದ ಮಾದರಿಯನ್ನು ಸಂಗ್ರಹಿಸಿತ್ತು. ಸಾಯುವ ಹಿಂದಿನ ದಿನ ರಾತ್ರಿ ಒಂಭತ್ತು ಗಂಟೆಗೆ ಆಹಾರ ಸೇವಿಸಿದ್ದ ತಿವಾರಿ, ಮರುದಿನ ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದರು ಎನ್ನುವುದಾದರೆ ತಿವಾರಿ ಅವರ ದೇಹ ದಲ್ಲಿ ಜೀರ್ಣವಾಗದೇ ಉಳಿದಿದ್ದ ಆಹಾರ ಇರಲು ಹೇಗೆ ಸಾಧ್ಯ ಎನ್ನುವ ಅನುಮಾನ ಮೂಡಿದೆ. 

ಆರೋಗ್ಯವಂತ ಮನುಷ್ಯನ ದೇಹ ಸಾಮಾನ್ಯ ವಾಗಿ 5 ಗಂಟೆಗಳ ಅವಧಿಯಲ್ಲಿ ಆತ ತಿಂದ ಆಹಾರ ವನ್ನು ಪಚನಗೊಳಿಸುತ್ತದೆ. ಆದರೆ ತಿವಾರಿ ಅವರು ರಾತ್ರಿ 9 ರಲ್ಲಿ ಸೇವಿಸಿದ್ದ ಆಹಾರ ಬೆಳಗ್ಗೆಯಾದರೂ ಜೀರ್ಣವಾಗದೇ ಇರಲು ಹೇಗೆ ಸಾಧ್ಯ? ಇದನ್ನು ಗಮನಿಸಿ ಆಹಾರದಲ್ಲಿ ವಿಷದ ಅಂಶ ಏನಾದರೂ ಇತ್ತೇ ಎನ್ನುವುದನ್ನು ವೈದ್ಯರು ನೋಡುತ್ತಿದ್ದಾರೆ. ಇದನ್ನು ಖಾತರಿಪಡಿಸಿಕೊಳ್ಳಲು ವೈದ್ಯರು ಹೊಟ್ಟೆಯಲ್ಲಿದ್ದ ಆಹಾರದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.

ಮೇ 17ರಂದು ರಾತ್ರಿ ಒಂಭತ್ತು ಗಂಟೆಗೆ ಅನುರಾಗ್‌ ತಿವಾರಿ ಲಖನೌದ ರೆಸ್ಟೋರೆಂಟ್‌ವೊಂದರಲ್ಲಿ ಊಟ ಮುಗಿಸಿ ಅತಿಥಿಗೃಹಕ್ಕೆ ಬರುತ್ತಾರೆ. ಅದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ತಿವಾರಿ ಸಾವು ಸಂಭವಿಸಿದೆ ಎಂಬ ಅಂಶ ಲಖನೌ ವೈದ್ಯ ಡಾ.ಅಶುತೋಷ್‌ ದುಬೆ ನೀಡಿರುವ ಪ್ರಾಥಮಿಕ ವರದಿಯಲ್ಲಿದೆ.

----

ವಾಟ್ಸ್‌ಆ್ಯಪ್‌ ನೀಡಿದ ಹೊಸ ಸುಳಿವು

ಅನುರಾಗ್‌ ತಿವಾರಿ ತನ್ನ ಸೋದರ ನಿಗೆ ಕಳುಹಿಸಿದ್ದ ಸಂದೇಶ
(ಸಹೋದರ ಮಾಯಾಂಕ್‌ ತಿವಾರಿ ತನ್ನ ಸ್ನೇಹಿತ ರಾಕೇಶ್‌ಗೆ ಕಳುಹಿಸಿದ ಸಂದೇಶ) (ಮಾ.29 ಬೆಳಗ್ಗೆ 9.01) 
ಮಾಯಾಂಕ್‌: ಅನುರಾಗ್‌ ಸ್ವಲ್ಪ ಟೆನ್ಸ್‌'ಷನ್‌ನಲ್ಲಿ ಇದ್ದಾರೆ. ಅವರ ಜೀವಕ್ಕೆ ಅಪಾಯವಿದೆಯಂತೆ. 
ರಾಕೇಶ್‌: ಅರೆ, ಅವರಿಗೆ ಹಾಗೆ ಏಕೆ ಅನಿಸಿತು? 
ರಾಕೇಶ್‌: ಏನಾದರೂ ಮಾತುಕತೆ ಆಗಿದೆಯಾ? ಯಾವುದಕ್ಕೂ ಒಮ್ಮೆ ಅನುರಾಗ್‌ ಜತೆ ಮಾತನಾಡಿ.

ಅನುರಾಗ್‌ ತಿವಾರಿಗೆ ಜೀವ ಬೆದರಿಕೆ ಇತ್ತಾ? ಅವರಿಗೆ ಬೆಂಗಳೂರಿನಲ್ಲಿಯೇ ತೊಂದರೆ ಇತ್ತಾ ಎನ್ನುವ ಪ್ರಶ್ನೆಗಳಿಗೆ ತಿವಾರಿ ಕುಟುಂಬಕ್ಕೆ ಸಿಕ್ಕಿರುವ ದಾಖಲೆಗಳು ಹೌದು ಎನ್ನುತ್ತವೆ. ಬೆಂಗಳೂರಿನಲ್ಲಿ ತಮ್ಮ ಪರಿಸ್ಥಿತಿ ಚೆನ್ನಾ ಗಿಲ್ಲ ಎನ್ನುವ ಮಾಹಿತಿಯನ್ನು ಅನುರಾಗ್‌ ಅವರು ಮಾರ್ಚ್'ನಲ್ಲೇ ತಮ್ಮ ಕುಟುಂಬದವರಿಗೆ ನೀಡಿ ದ್ದರು. ಜನವರಿಯಲ್ಲಿ ಆಹಾರ ಇಲಾಖೆಯ ಆಯುಕ್ತರಾಗಿ ಬಂದ ಅನುರಾಗ್‌ ತಿವಾರಿ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಡುವೆ ಸಂಘರ್ಷ ನಡೆಯುತ್ತಿರುವು ದರಿಂದ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ ಎನ್ನುವುದನ್ನು ಸಹೋದರ ಮಾಯಾಂಕ್‌ ತಿವಾರಿ ಜತೆ ವಾಟ್ಸ್‌ ಆ್ಯಪ್‌ ಸಂದೇ ಶದ ಮೂಲಕ ಹೇಳಿಕೊಂಡಿ ದ್ದರು. ಈ ಬಗ್ಗೆ ಮಾ.25ರಂದು ಸ್ವತಃ ಅನುರಾಗ್‌ ಅವರು ಸಹೋ ದರನಿಗೆ ವಾಟ್ಸ್‌ ಆ್ಯಪ್‌ ಸಂದೇಶ ಕಳುಹಿಸಿದ್ದರು.

ವಾಟ್ಸ್‌'ಆ್ಯಪ್‌ 1
(ತಿವಾರಿ ಮಾಯಾಂಕ್‌ಗೆ ಕಳುಹಿಸಿದ ಸಂದೇಶ)
(ಮಾರ್ಚ್ 25 ರಾತ್ರಿ 8.25) 

ಅಣ್ಣಾ...
ಬೆಂಗಳೂರಿನಲ್ಲಿ ಪರಿಸ್ಥಿತಿ ಸರಿಯಾಗಿಲ್ಲ. ಇಲ್ಲಿನ ರಾಜಕಾರಣ ಮತ್ತು ಅಧಿಕಾರಶಾಹಿ ನಡುವೆ ಘರ್ಷಣೆ ಕೆಟ್ಟದಾಗಿದೆ. ಆದ್ದರಿಂದ ಕೆಲವೇ ದಿನಗಳಲ್ಲಿ ನಾನು ಉತ್ತರ ಪ್ರದೇಶಕ್ಕೆ ಬರುತ್ತೇನೆ. ಅಲ್ಲಿಯವರೆಗೂ ತಂದೆ ತಾಯಿಯನ್ನು ಬೆಂಗಳೂರಿಗೆ ಕಳುಹಿಸುವ ಬಗ್ಗೆ ಇನ್ನೊಮ್ಮೆ ಯೋಚನೆ ಮಾಡುವುದು ಒಳ್ಳೆಯದು.
ಈ ಬಗ್ಗೆ ನೀನೇ ನನಗೆ ಸಲಹೆ ನೀಡು.

ಕನ್ನಡಪ್ರಭ ವಾರ್ತೆ
epaper.kannadaprabha.in