ನವದೆಹಲಿ[ಅ.03]: ‘ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ (ಅಟ್ರಾಸಿಟಿ) ಕಾಯ್ದೆಯಡಿ ದೂರು ದಾಖಲಾದರೆ ಕೂಡಲೇ ಆರೋಪಿಗಳನ್ನು ಬಂಧಿಸಬೇಕಿಲ್ಲ. ಡಿಎಸ್ಪಿ ದರ್ಜೆಯ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿ, ಸೂಕ್ತ ಎನಿಸಿದರೆ ಮಾತ್ರ ಕ್ರಮ ಕೈಗೊಳ್ಳಬಹುದು’ ಎಂದು 2018ರ ಮಾ.20ರಂದು ನೀಡಿದ್ದ ವಿವಾದಾತ್ಮಕ ನಿರ್ದೇಶನವನ್ನು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ವಾಪಸ್‌ ಪಡೆದಿದೆ.

ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸುವ ಮುನ್ನ ಪ್ರಾಥಮಿಕ ತನಿಖೆ ನಡೆಸಬೇಕು ಎಂಬ ನ್ಯಾಯಾಲಯದ ನಿರ್ದೇಶನ ಅನಗತ್ಯವಾದುದು. ಈ ಪೂರ್ಣಾಧಿಕಾರವನ್ನು ಪ್ರಯೋಗಿಸಬಾರದಿತ್ತು. ಸಂವಿಧಾನದಡಿಯೂ ಆ ನಿರ್ದೇಶನಕ್ಕೆ ಸಮ್ಮತಿ ಇಲ್ಲ ಎಂದು ಕಳೆದ ವರ್ಷ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪಿಗೆ ತ್ರಿಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಸಮಾನತೆಗಾಗಿ ದಲಿತರು ನಡೆಸುತ್ತಿರುವ ಹೋರಾಟ ಇನ್ನೂ ಮುಗಿದಿಲ್ಲ. ದಲಿತರು ಈಗಲೂ ಅಸ್ಪೃಶ್ಯತೆ, ನಿಂದನೆ ಹಾಗೂ ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎಂ.ಆರ್‌. ಶಾ ಹಾಗೂ ಬಿ.ಆರ್‌. ಗವಾಯಿ ಅವರಿದ್ದ ತ್ರಿಸದಸ್ಯ ಪೀಠ ಹೇಳಿದೆ.

ಅಟ್ರಾಸಿಟಿ ಕಾಯ್ದೆಯ ಅಂಶಗಳನ್ನು ದುರ್ಬಳಕೆ ಮಾಡಿಕೊಂಡರೆ ಹಾಗೂ ಸುಳ್ಳು ಪ್ರಕರಣಗಳನ್ನು ದಾಖಲಿಸಿದರೆ ಅದಕ್ಕೆ ಜಾತಿ ವ್ಯವಸ್ಥೆ ಕಾರಣವಲ್ಲ. ಮಾನವ ವೈಫಲ್ಯವೇ ಅದಕ್ಕೆ ಕಾರಣ ಎಂದು ಕೋರ್ಟ್‌ ಹೇಳಿದೆ.

ಏನಿದು ಪ್ರಕರಣ?:

ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ 2018ರ ಮಾ.20ರಂದು ಆ ಕಾಯ್ದೆಯನ್ನೇ ದುರ್ಬಲಗೊಳಿಸುವ ನಿರ್ದೇಶನವನ್ನು ನೀಡಿತ್ತು. ಅಟ್ರಾಸಿಟಿ ಕಾಯ್ದೆಯಡಿ ದೂರು ದಾಖಲಾದರೆ, ಅದರಲ್ಲಿ ತಿರುಳಿದೆಯೇ ಅಥವಾ ಪ್ರೇರಿತ ದೂರು ಅದಾಗಿದೆಯೇ ಎಂಬುದನ್ನು ಡಿಎಸ್ಪಿ ದರ್ಜೆಯ ಅಧಿಕಾರಿಗಳು ಪರಿಶೀಲಿಸಬೇಕು. ಆನಂತರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು. ಈ ತೀರ್ಪಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದಲಿತ ಸಮುದಾಯ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಬದಿಗೊತ್ತಲು ಕೇಂದ್ರ ಸರ್ಕಾರ ‘ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2018’ ಅನ್ನು ರೂಪಿಸಿತ್ತು.

ಈ ನಡುವೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆದು, ಇದೀಗ 2018ರ ನಿರ್ದೇಶನವನ್ನೇ ಹಿಂಪಡೆಯಲು ನ್ಯಾಯಾಲಯ ನಿರ್ಧರಿಸಿದೆ.