ಮೈಸೂರು : ಕಾರು ಅಪಘಾತದಲ್ಲಿ ಗಾಯ​ಗೊಂಡು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್‌ ತೂಗುದೀಪ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. 3ನೇ ದಿನವಾದ ಬುಧವಾರ ಸಹ ವೈದ್ಯರು ದರ್ಶನ್‌ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ.

ಏತನ್ಮಧ್ಯೆ, ಅಪಘಾತಕ್ಕೀಡಾದ ಕಾರಿನಲ್ಲಿ ಎಷ್ಟುಮಂದಿ ಇದ್ದರು ಎನ್ನುವ ಗೊಂದಲ ಇದೀಗ ಹುಟ್ಟಿಕೊಂಡಿದೆ.  ಕಾರಿನಲ್ಲಿ ಐದು ಜನ ಇದ್ದರೆಂದು ಹೇಳಲಾಗುತ್ತಿದೆ. ಆದರೆ, ಎಷ್ಟುಜನ ಇದ್ದರು ಎಂಬ ಬಗ್ಗೆ ತನಿಖೆ ಆಗಬೇಕಿದೆ. ತನಿಖೆ ಬಳಿಕವೇ 5 ಮಂದಿ ಇದ್ದರೇ ಅಥವಾ 6 ಮಂದಿ ಇದ್ದರೇ ಎಂಬುದು ಸ್ಪಷ್ಟವಾಗಬೇಕಿದೆ. ಈಗಾಗಲೇ ಗಾಯಾಳುಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವ ರಾವ್‌ ಹೇಳಿದ್ದಾರೆ.

ಆರೋಗ್ಯವಾಗಿದ್ದಾರೆ:  ದರ್ಶನ್‌ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದೆ. ಕೈಯೂತ, ನೋವು ಸಹ ಕಡಿಮೆಯಾಗಿದೆ. ಕೈಗೆ ಹಾಕಿರುವ ಬ್ಯಾಂಡೇಜ್‌ ಬದಲಿಸಲಾಗಿದ್ದು, ಗಾಯವನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಅದನ್ನು ಬಿಟ್ಟು ಅವರು ಆರೋಗ್ಯವಾಗಿದ್ದು ಓಡಾಡಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಉಪೇಂದ್ರ ಶೆಣೈ ತಿಳಿಸಿದ್ದಾರೆ.

ದರ್ಶನ್‌ ಗೆಳೆಯ ರಾಯ್‌ ಆಂಟೋನಿಗೂ ಮಂಗಳವಾರ ಶಸ್ತ್ರಚಿಕಿತ್ಸೆ ಆಗಿದ್ದು, ಅವರೂ ಚೇತರಿಸಿಕೊಂಡಿದ್ದಾರೆ. ಈ ಇಬ್ಬರನ್ನು ಒಂದೆರಡು ದಿನಗಳಲ್ಲಿ ಡಿಸ್ಚಾಜ್‌ರ್‍ ಮಾಡಲಾಗುವುದು. ಈಗಾಗಲೇ ಹಿರಿಯ ನಟ ದೇವರಾಜ್‌, ಅವರ ಪುತ್ರ ಪ್ರಜ್ವಲ್‌ ಅವರನ್ನು ಡಿಸ್ಚಾಜ್‌ರ್‍ ಮಾಡಲಾಗಿದೆ ಎಂದು ಹೇಳಿದರು.

ದರ್ಶನ್‌ ಭೇಟಿ:  ನಟ ದರ್ಶನ್‌ರನ್ನು ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಸಾ.ರಾ. ಗೋವಿಂದು, ಸಂದೇಶ್‌ ನಾಗರಾಜ್‌, ನಟರಾದ ದೊಡ್ಡಣ್ಣ, ಬುಲೆಟ್‌ ಪ್ರಕಾಶ್‌, ನಟಿ ಶಾನ್ವಿ ಶ್ರೀವಾಸ್ತವ, ಸಂಸದ ಪ್ರತಾಪ್‌ ಸಿಂಹ, ಡಿಸಿಎಫ್‌ ಸಿದ್ರಾಮಪ್ಪ ಚಳಕಾಪುರೆ ಮೊದಲಾದವರು ಬುಧವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಕಾರಿನಲ್ಲಿದ್ದವರು ಎಷ್ಟುಜನ?:  ಅಪಘಾತ ವೇಳೆ ಕಾರಿನಲ್ಲಿ ನಾಲ್ವರು ಇದ್ದರು ಎಂದು ಮೈಸೂರಿನ ವಿವಿ ಪುರಂ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಈ ಬಗ್ಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವ ರಾವ್‌, ಕಾರಿನಲ್ಲಿ ಐದು ಜನ ಇದ್ದರೆಂದು ಹೇಳಲಾಗುತ್ತಿದೆ. ಆದರೆ, ಎಷ್ಟುಜನ ಇದ್ದರು ಎಂಬ ಬಗ್ಗೆ ತನಿಖೆ ಆಗಬೇಕಿದೆ. ತನಿಖೆ ಬಳಿಕವೇ 5 ಮಂದಿ ಇದ್ದರೇ ಅಥವಾ 6 ಮಂದಿ ಇದ್ದರೇ ಎಂಬುದು ಸ್ಪಷ್ಟವಾಗಬೇಕಿದೆ. ಈಗಾಗಲೇ ಗಾಯಾಳುಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.