ಒಂದು ವೇಳೆ ಹೆಚ್ಚುವರಿ ಖಾತೆ ನೀಡಲು ಸಾಧ್ಯವಾಗದಿದ್ದರೆ, ಪಕ್ಷದಲ್ಲೇ ಹೊಸ ಹುದ್ದೆ ಸೃಷ್ಟಿಸಿ ಅದನ್ನು ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ
ಬೆಂಗಳೂರು(ಜೂ.30): ಕೆಪಿಸಿಸಿ ಹುದ್ದೆಗೆ ಪ್ರಯತ್ನಿಸಿ ಅದನ್ನು ಪಡೆಯುವಲ್ಲಿ ವಿಫಲರಾದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಂದು ಮಹತ್ವದ ಹೊಣೆಗಾರಿಕೆ ಶೀಘ್ರದಲ್ಲೇ ದೊರೆಯಲಿದೆ ಎನ್ನಲಾಗುತ್ತಿದೆ.
ಆದರೆ, ಇದು ಹೆಚ್ಚುವರಿ ಖಾತೆಯೋ ಅಥವಾ ಪಕ್ಷದಲ್ಲಿ ಹೆಚ್ಚುವರಿ ಹೊಣೆಗಾರಿಕೆಯೋ ಎಂಬುದು ಸ್ಪಷ್ಟವಿಲ್ಲ. ಮೂಲಗಳ ಪ್ರಕಾರ ಒಂದು ವೇಳೆ ಗೃಹ ಖಾತೆಯನ್ನು ರಮೇಶ್‌ಕುಮಾರ್ ಅಥವಾ ರಾಮಲಿಂಗಾರೆಡ್ಡಿ ಅವರಿಬ್ಬರ ಪೈಕಿ ಒಬ್ಬರಿಗೆ ನೀಡಿದರೆ, ಅವರಿಂದ ತೆರವಾಗುವ ಖಾತೆಯನ್ನು ಶಿವಕುಮಾರ್ ಅವರಿಗೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಪೈಕಿ ರಮೇಶ್‌ಕುಮಾರ್ ಅವರು ಹೆಚ್ಚುವರಿಯಾಗಿ ಗೃಹಖಾತೆ ದೊರಕಿದರೆ ಮಾತ್ರ ಅದನ್ನು ಒಪ್ಪುವ ಸಾಧ್ಯತೆಯಿದೆ. ಆದರೆ, ರಾಮಲಿಂಗಾರೆಡ್ಡಿ ಅವರು ಗೃಹಖಾತೆ ದೊರೆತರೇ ಸಾರಿಗೆ ಖಾತೆಯನ್ನು ಬಿಟ್ಟುಕೊಡಲು ತಯಾರಿದ್ದಾರೆ ಎಂದು ಅವರ ಮೂಲಗಳು ಹೇಳುತ್ತವೆ. ಒಂದು ವೇಳೆ ಹೆಚ್ಚುವರಿ ಖಾತೆ ನೀಡಲು ಸಾಧ್ಯವಾಗದಿದ್ದರೆ, ಪಕ್ಷದಲ್ಲೇ ಹೊಸ ಹುದ್ದೆ ಸೃಷ್ಟಿಸಿ ಅದನ್ನು ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
(ಕನ್ನಡಪ್ರಭ ವಾರ್ತೆ)
