ಚೀನಾ, ಅಮೆರಿಕ, ರಷ್ಯಾಗಳಲ್ಲಿ ಮಾತ್ರ ವ್ಯಾಪಕವಾಗಿ ಹಬ್ಬಿರುವ ‘ಬ್ಲೂ ವೇಲ್’ ಅಂತರ್ಜಾಲ ಆಟ ಭಾರತದಲ್ಲೂ ವ್ಯಾಪಿಸತೊಡಗಿದ್ದು, ಮತ್ತೋರ್ವ ಶಾಲಾ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದಿದೆ.

ಕೋಲ್ಕತಾ(ಆ.14): ಚೀನಾ, ಅಮೆರಿಕ, ರಷ್ಯಾಗಳಲ್ಲಿ ಮಾತ್ರ ವ್ಯಾಪಕವಾಗಿ ಹಬ್ಬಿರುವ ‘ಬ್ಲೂ ವೇಲ್’ ಅಂತರ್ಜಾಲ ಆಟ ಭಾರತದಲ್ಲೂ ವ್ಯಾಪಿಸತೊಡಗಿದ್ದು, ಮತ್ತೋರ್ವ ಶಾಲಾ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಇದೇ ವೇಳೆ ಪ್ರಾಣಕ್ಕೆ ಸಂಚಕಾರ ತಂದು ಕೊಳ್ಳಲು ಮುಂದಾಗಿದ್ದ ಉತ್ತರಾಖಂಡದ ಡೆಹ್ರಾಡೂನ್‌ನ 5ನೇ ತರಗತಿಯ ಬಾಲಕ ಶಾಲಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬಚಾವಾಗಿದ್ದಾನೆ. ಬಂಗಾಳದಲ್ಲಿ: ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆಗೆ ಶರಣಾದ 10ನೇ ತರಗತಿ ಬಾಲಕನನ್ನು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಆನಂದಪುರದ ಸ್ಥಳೀಯ ಶಾಲೆಯ ಅಂಕನ್ ಡೇ ಎಂದು ಗುರುತಿಸಲಾಗಿದೆ.

ಬ್ಲೂ ವೇಲ್‌ನ ಕೊನೆಯ ಟಾಸ್ಕ್ ಅನ್ನು ಪೂರೈಸಲು ಶನಿವಾರ ಮಧ್ಯಾಹ್ನ ಮನೆಯ ಶೌಚಾಲಯದೊಳಕ್ಕೆ ಹೋದ ಬಾಲಕ ಅಂಕನ್ ತನ್ನ ಮುಖಕ್ಕೆ ಪ್ಲಾಸ್ಟಿಕ್ ಬ್ಯಾಗ್ ಹಾಕಿಕೊಂಡು ನೈಲಾನ್ ಹಗ್ಗವನ್ನು ಬಿಗಿದುಕೊಂಡಿದ್ದಾನೆ. ಸ್ನಾನ ಮುಗಿಸಿ ಊಟ ಮಾಡುವುದಾಗಿ ಹೇಳಿದ್ದ ಬಾಲಕ ತುಂಬಾ ಹೊತ್ತಿನ ಬಳಿಕವೂ ಶೌಚಾಲಯದಿಂದ ಹೊರ ಬರದಿದ್ದರಿಂದ ಗಾಬರಿಗೊಂಡ ಪೋಷಕರು ಬಾಗಿಲು ಮುರಿದಿದ್ದಾರೆ. ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಬಾಲಕ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದರು.

ಅಂಕನ್ ನಿರಂತರವಾಗಿ ಬ್ಲೂ ವೇಲ್ ಆನ್‌ಲೈನ್ ಗೇಮ್ ಆಟವಾಡುತ್ತಿದ್ದ ಎಂದು ಸಹಪಾಠಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಬಗ್ಗೆ ಕೇಸ್ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಡೆಹ್ರಾಡೂನ್‌ನಲ್ಲಿ:

ಇದೇ ವೇಳೆ, ಡೆಹ್ರಾ ಡೂನ್‌ನಲ್ಲೂ ಇದೇ ರೀತಿ ಬ್ಲೂವೇಲ್ ಆಟ ಆಡುತ್ತ ಆಟದ ಕೊನೆ ಹಂತದಲ್ಲಿ ಆತ್ಮ ಹತ್ಯೆಗೆ ಬಾಲಕನೋರ್ವ ಯತ್ನಿಸಿದ್ದಾನೆ. ಆದರೆ ಈತನನ್ನು ರಕ್ಷಿಸಲಾಗಿದೆ. ಪ್ರಾಣಾಪಾ ಯದಿಂದ ರಕ್ಷಣೆ ಮಾಡಲಾಗಿರುವ ಬಾಲಕ ನಿಗೆ ಮನೋ ವೈದ್ಯರ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರದಲ್ಲಿ 3 ಪ್ರಕರಣ:

ಇತ್ತೀಚೆಗೆ ಮುಂಬೈನಲ್ಲಿ ಬ್ಲೂವೇಲ್ ಆಟ ಆಡುತ್ತ ಬಾಲಕನೋರ್ವ ಆಟದ ಕೊನೆಯಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದ. ಬಳಿಕ ಇನ್ನೂ ಈ ಥರದ 2ವಿಫಲ ಯತ್ನಗಳು ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ವರದಿಯಾಗಿದ್ದವು. ಏನಿದು ಆಟ?: ಬ್ಲೂವೇಲ್ ಆಟದಲ್ಲಿ ಹಲವು ಟಾಸ್ಕ್ ಗಳನ್ನು ನೀಡಲಾಗುತ್ತಿದ್ದು, ಎಲ್ಲ ಟಾಸ್ಕ್‌ಗಳು ಮುಗಿದ ನಂತರ ಕೊನೆಗೆ 50ನೇ ಟಾಸ್ಕ್ ಆಗಿ ಆತ್ಮಹತ್ಯೆ ಆಟ ಇರುತ್ತದೆ.