ರಾಜ್ಯ ಲೋಕಸೇವಾ ಆಯೋಗದ ಹಾಲಿ ಅಧ್ಯಕ್ಷ ಶ್ಯಾಂ ಭಟ್ ಅವರ ರಕ್ಷಣೆಗೆ ರಾಜ್ಯ ಸರ್ಕಾರ ಮತ್ತೊಮ್ಮೆ ನಿಂತಿದೆ. ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅನುಮೋದನೆ ಕೋರಿ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ. ಶ್ಯಾಮ್ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ರಾಜ್ಯ ಸರ್ಕಾರದ ಈ ನಡೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೆಂಗಳೂರು(ಜ.21): ರಾಜ್ಯ ಲೋಕಸೇವಾ ಆಯೋಗದ ಹಾಲಿ ಅಧ್ಯಕ್ಷ ಶ್ಯಾಂ ಭಟ್ ಅವರ ರಕ್ಷಣೆಗೆ ರಾಜ್ಯ ಸರ್ಕಾರ ಮತ್ತೊಮ್ಮೆ ನಿಂತಿದೆ. ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅನುಮೋದನೆ ಕೋರಿ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ. ಶ್ಯಾಮ್ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ರಾಜ್ಯ ಸರ್ಕಾರದ ಈ ನಡೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೆಂಗಳೂರಿನ ಸಿಟಿಜನ್ ಎಜುಕೇಷನ್ ಸೊಸೈಟಿ ಮತ್ತು ವಾಣಿ ಎಜುಕೇಷನ್ ಸೊಸೈಟಿಗೆ ಅಕ್ರಮವಾಗಿ ಲಾಭ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕುರಿತು ಶ್ಯಾಂ ಭಟ್ ಸೇರಿ ಒಟ್ಟು ಮೂವರ ವಿರುದ್ಧ ಎಸಿಬಿಗೆ ಅಶೋಕ್ಕುಮಾರ್ ಅಡಿಗ ಎನ್ನುವರು ದೂರು ದಾಖಲಿಸಿದ್ದರು. ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಲಾಬೂರಾಮ್ ಅವರು ಆರೋಪವನ್ನು ಸಾಬೀತುಪಡಿಸಿ ಸರ್ಕಾರಕ್ಕೆ ಪ್ರಾಥಮಿಕ ವಿಚಾರಣೆ ವರದಿ ಸಲ್ಲಿಸಿದ್ದರು. ಈ ವಿಚಾರಣೆ ವರದಿ ಆಧರಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಶ್ಯಾಮ್ ಭಟ್ ಸೇರಿ ಮೂವರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಎಸಿಬಿ ಎಡಿಜಿಪಿ ಆಗಿದ್ದ ಗಗನ್ ದೀಪ್ ಅವರು ಸರ್ಕಾರದ ಪೂರ್ವಾನುಮತಿ ಕೋರಿ ಪತ್ರವನ್ನು ಬರೆದಿದ್ದರು.
ಸಿಗದ ಅನುಮತಿ
ಖಾಸಗಿ ಶಿಕ್ಷಣ ಸಂಸ್ಥೆಗೆ ಅಕ್ರಮ ಲಾಭ ಮಾಡಿಕೊಟ್ಟಿರುವುದನ್ನು ಎಸಿಬಿ ಪ್ರಾಥಮಿಕ ವಿಚಾರಣೆ ವರದಿಯಲ್ಲಿ ನಿರೂಪಿಸಿದೆ. ಆದರೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಇದು §ಕೇವಲ ಕರ್ತವ್ಯ ಲೋಪ§ ಎಂದು ಸಚಿವ ಜಾರ್ಜ್ ಅಭಿಪ್ರಾಯ ನೀಡಿದ್ದಾರೆ.
ಸಚಿವರ ಅಭಿಪ್ರಾಯದಲ್ಲೇನಿದೆ?
ಶ್ಯಾಮ್ ಭಟ್ ಮತ್ತಿತರರ ಸಿಬ್ಬಂದಿಗಳ ವಿರುದ್ಧ ಪಿ.ಸಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೂ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಾಗರೀಕ ಸೇವಾ(ಸಿಸಿಎ) 1957ರ ನಿಯಮ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬಹುದು§ ಎಂದು ಶಿಫಾರಸ್ಸು ಮಾಡಿದ್ದಾರೆ.
ಕಳೆದ 6 ತಿಂಗಳ ಹಿಂದೆಯೇ ಎಸಿಬಿ ಎಡಿಜಿಪಿ ಬರೆದಿದ್ದ ಪತ್ರ ಆಧರಿಸಿ ಡಿಪಿಎಆರ್ ಕಡತವನ್ನು ನಗರಾಭಿವೃದ್ಧಿ ಇಲಾಖೆಗೆ ಕಳಿಸಿತ್ತು. ಕಡತವನ್ನು ಈಗಲೂ ನಗರಾಭಿವೃದ್ಧಿ ಇಲಾಖೆ ತನ್ನ ಬಳಿಯೇ ಇರಿಸಿಕೊಂಡಿದೆ. ಸ್ಪಷ್ಟ ಅಭಿಪ್ರಾಯ ನೀಡಿ ಕಡತವನ್ನು ಹಿಂದಿರುಗಿಸಬೇಕು ಎಂದು ಡಿಪಿಎಆರ್ ಹಲವು ಬಾರಿ ನೆನಪೋಲೆ ಬರೆದರೂ ಇದುವರೆಗೂ ಕಡತವನ್ನು ಹಿಂದಿರುಗಿಸಿಲ್ಲ ಎಂದು ತಿಳಿದು ಬಂದಿದೆ.
ನೆನಪೋಲೆಯಲ್ಲೇನಿತ್ತು?
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಹಾಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್,ಎಸ್ಟೇಟ್ ಅಧಿಕಾರಿ ಶೈಲಜಾ, ಉಪ ಕಾರ್ಯದರ್ಶಿ ಎನ್.ಸಿ.ಉಷಾರಾಣಿ, ರಾಜೇಂದ್ರಕುಮಾರ್ ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಪೂರ್ವಾನುಮತಿ ಬೇಕು. ಬಿಡಿಎ, ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಪೂರ್ವಾನುಮೋದನೆ ಕೋರಿ ಕಡತ ಕಳಿಸಲಾಗಿದೆ. ಈ ಕುರಿತು ಸ್ಪಷ್ಟ ಅಭಿಪ್ರಾಯದೊಂದಿಗೆ ಕಡತವನ್ನು ಕೂಡಲೇ ಹಿಂದಿರುಗಿಸಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಬಸವರಾಜು ಅವರು ನಗರಾಭಿವೃದ್ಧಿ ಇಲಾಖೆಗೆ ಡಿಸೆಂಬರ್ 8ರಂದು ನೆನಪೋಲೆ ಕಳಿಸಿದ್ದರು.
ವಿಚಾರಣೆ ವರದಿಯಲ್ಲೇನಿದೆ?
ಸಿಟಿಜನ್ ಎಜುಕೇಷನ್ ಸೊಸೈಟಿ ಮಂಜೂರಾಗಿದ್ದ ಜಾಗಕ್ಕಿಂತ 3,627.81 ಚದುರ ಅಡಿ ಅತಿಕ್ರಮಿಸಿತ್ತು. ಗುತ್ತಿಗೆ ಶುಲ್ಕ ಮತ್ತು ದಂಡದ ರೂಪದಲ್ಲಿ 99,13,095 ರೂಪಾಯಿ ಬಿಡಿಎ ಕಟ್ಟಿಸಿಕೊಳ್ಳಲಿಲ್ಲ.ಹಾಗೆಯೇ ವಾಣಿ ಎಜುಕೇಷನ್ ಸೊಸೈಟಿ ಗುತ್ತಿಗೆ ಅವಧಿಯನ್ನು ಆಯುಕ್ತರಾಗಿದ್ದ ಶ್ಯಾಮ್ ಭಟ್ ಅವರು ನವೀಕರಿಸಿರಲಿಲ್ಲ. ಈ ಸಂಸ್ಥೆಯಿಂದ 1,55,30,350 ರೂಪಾಯಿ ದಂಡವನ್ನು ವಸೂಲಿ ಮಾಡದೇ ಅನಧಿಕೃತವಾಗಿ ಸ್ವತ್ತನ್ನು ಅವರ ವಶದಲ್ಲಿರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಅಂಶವನ್ನು ವಿಚಾರಣೆ ವೇಳೆಯಲ್ಲಿ ಎಸಿಬಿ ಎಸ್ಪಿ ಲಾಬೂರಾಮ್ ಸಾಬೀತು ಪಡಿಸಿದ್ದರು. ಪಿ.ಸಿ.ಕಾಯ್ದೆ 1988 ಕಲಂ 13(1)(ಸಿ), 13(2) ಅಡಿಯಲ್ಲಿ ಅಪರಾಧ ಎಸಗಿರುವುದು ಪ್ರಾಥಮಿಕ ವಿಚಾರಣೆ ಕಾಲದಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿಯಲ್ಲಿ ದಾಖಲಿಸಿದ್ದರು.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
