ಎಷ್ಟೇ ಕಷ್ಟವಾದರೂ ಸರಿ, ಎತ್ತಿನಹೊಳೆ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿಯೇ ತೀರುತ್ತೇವೆ. ಇದುವೇ ನಮ್ಮ ಆದ್ಯತೆ, ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿತ್ರದುರ್ಗ (ಮೇ.13): ಅನ್ನಭಾಗ್ಯ ಹಾಗೂ ಬರಪರಿಹಾರ ಕಾಮಗಾರಿಗಳನ್ನು ಯಶಸ್ವಿಯಾಗಿ ಮಾಡಿದ್ದರಿಂದಾಗಿ ಭೀಕರ ಬರವಿದ್ದರೂ ಜನ ಗುಳೆ ಹೋಗುವುದು ತಪ್ಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರಕ್ಕೆ 4 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗದಲ್ಲಿ "ಸೌಲಭ್ಯಗಳ ವಿತರಣೆಯೇ ಸಂಭ್ರಮ" ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಎಷ್ಟೇ ಕಷ್ಟವಾದರೂ ಸರಿ, ಎತ್ತಿನಹೊಳೆ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿಯೇ ತೀರುತ್ತೇವೆ. ಇದುವೇ ನಮ್ಮ ಆದ್ಯತೆ, ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದರ್ಭದಲ್ಲಿ ಹೇಳಿದ್ದಾರೆ.
ರೈತರ ಸಾಲಮನ್ನಾ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದೆ. ಈ ನಿರ್ಧಾರ ಕರ್ನಾಟಕಕ್ಕೆ ಏಕಿಲ್ಲ? ಒಂದು ಕಣ್ಣಿಗೆ ಬೆಣ್ಣೆ. ಮತ್ತೊಂದು ಕಣ್ಣಿಗೆ ಸುಣ್ಣವೇ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ವಿಪಕ್ಷದ ಹಿರಿಯ ನಾಯಕರು ಲೋಕಸಭಾ ಸದಸ್ಯರಾಗಿದ್ದರೂ ಒಮ್ಮೆಯೂ ಸಾಲಮನ್ನಾ ವಿಚಾರವಾಗಿ, ಮಹದಾಯಿ ವಿಚಾರವಾಗಿ ಲೋಕಸಭೆಯಲ್ಲಿ ದನಿ ಎತ್ತಿಲ್ಲ. ಇದು ರಾಜ್ಯದ ಜನತೆ ಬಗ್ಗೆ ಅವರ ಕಾಳಜಿಯನ್ನು ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಕೃಷಿ, ನೀರಾವರಿ ಸೇರಿದಂತೆ ಆದ್ಯತಾ ವಲಯಗಳಿಗೆ ಬರದ ನಡುವೆಯೂ ಅನುದಾನದಲ್ಲಿ ಯಾವುದೇ ಕಡಿಮೆ ಮಾಡಿಲ್ಲ. ಎತ್ತಿನಹೊಳೆ ಯೋಜನೆ, ಭದ್ರಾ ಮೇಲ್ದಂಡೆ ನಮ್ಮ ಆದ್ಯತೆಯ ವಿಷಯಗಳು ಎಂದು ಅವರು ಹೇಳಿದ್ದಾರೆ.
