Asianet Suvarna News Asianet Suvarna News

ನಾನೊಬ್ಬ ಫಕೀರ ನನಗೇಕೆ ಅಧಿಕಾರ – ಅಣ್ಣಾ ಹಜಾರೆ

ನಾನೊಬ್ಬ ಫಕೀರ, ನನಗ್ಯಾಕೆ ಬೇಕು ಅಧಿಕಾರ? ಇದರಿಂದ ನಾನು ದೂರ ಇದ್ದೇನೆ. ನಾನು ಅಂಥದ್ದಕ್ಕೆಲ್ಲ ಆಸೆ ಪಡುವುದಿಲ್ಲ. ವ್ಯವಸ್ಥೆಯ ಸುಧಾರಣೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿಯೇ ನನ್ನ ಹೋರಾಟ ಎಂದು ಅಣ್ಣಾ ಹಜಾರೆ ಹೇಳಿದರು.

Anna hazare Talks About Politics in Koppala

ಕೊಪ್ಪಳ (ಜ.05): ನಾನೊಬ್ಬ ಫಕೀರ, ನನಗ್ಯಾಕೆ ಬೇಕು ಅಧಿಕಾರ? ಇದರಿಂದ ನಾನು ದೂರ ಇದ್ದೇನೆ. ನಾನು ಅಂಥದ್ದಕ್ಕೆಲ್ಲ ಆಸೆ ಪಡುವುದಿಲ್ಲ. ವ್ಯವಸ್ಥೆಯ ಸುಧಾರಣೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿಯೇ ನನ್ನ ಹೋರಾಟ ಎಂದು ಅಣ್ಣಾ ಹಜಾರೆ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು, ‘ನೀವ್ಯಾಕೆ ಸಿಎಂ ಆಗಬಾರದು ಎಂದು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರಲ್ಲದೆ, ನೀವ್ಯಾಕೆ ಅಣ್ಣಾ ಹಜಾರೆ ಆಗಬಾರದು ಎಂದು ಪ್ರಶ್ನೆ ಕೇಳಿದವರಿಗೇ ಮರು ಪ್ರಶ್ನೆ ಹಾಕಿದರು.

ರಾಜಕಾರಣಿಗಳು ಪಾಕಿಸ್ತಾನದವರಲ್ಲ: ಸ್ಫೂರ್ತಿ ಎಂಬ ವಿದ್ಯಾರ್ಥಿನಿಯ ‘ರಾಜಕಾರಣಿಗಳಿಗೆ ಹಣದ ವ್ಯಾಮೋಹ ಹೆಚ್ಚಿದೆ. ಅದರಿಂದಲೇ ಭ್ರಷ್ಟಾಚಾರವಾಗುತ್ತಿದೆ. ಅವರನ್ನೇ ಯಾಕೆ ನೀವು ಮನವೊಲಿಸಬಾರದು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ದೇಶದಲ್ಲಿರುವ ರಾಜಕಾರಣಿಗಳು ಪಾಕಿಸ್ತಾನದಿಂದ ಬಂದಿಲ್ಲ. ಅವರೂ ನಮ್ಮವರೇ, ಆದರೆ, ಭ್ರಷ್ಟಾಚಾರದ ಮೂಲವೇ ರಾಜಕಾರಣವಾಗಿದೆ. ಇಂಥವರನ್ನು ಆಯ್ಕೆ ಮಾಡುವ ಕೀಲಿ ಕೈ ನಮ್ಮ ಬಳಿ ಇದೆ. ಹೀಗಿದ್ದೂ ನಾವು ಹಣ, ಹೆಂಡಕ್ಕಾಗಿ ನಮ್ಮ ಮತವನ್ನು ಕೊಟ್ಟು ಆಯ್ಕೆ ಮಾಡುತ್ತೇವೆ. ಇದರಿಂದ ಹೊರ ಬರದಿದ್ದರೆ ದೇಶಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದರು.

ಲೋಕಪಾಲ್ ಜಾರಿಗೆ ನಡುಕ: ಲೋಕಪಾಲ ಬಿಲ್ ಜಾರಿಯಾದರೆ, ಸ್ವತಃ ಪ್ರಧಾನಮಂತ್ರಿಗಳೂ ಅದರ ವ್ಯಾಪ್ತಿಯಲ್ಲಿ ಬರುತ್ತಾರೆ. ಅನೇಕ ಮಂತ್ರಿ ಮಹೋದಯರು ಮನೆಗೆ ಹೋಗುತ್ತಾರೆ. ಹೀಗಾಗಿ, ಲೋಕಪಾಲ್ ಜಾರಿ ಮಾಡಲು ಅವರಿಗೆ ನಡುಕ ಹುಟ್ಟಿದೆ. ಹೀಗಾಗಿಯೇ ಮಾ.23ರಂದು ದೆಹಲಿಯಲ್ಲಿ ಮತ್ತೆ ಉಪವಾಸ ಸತ್ಯಾಗ್ರಹ ಕೂರಲಿದ್ದೇನೆ ಎಂದರು.

 ಲೋಕಪಾಲ್ ವಿಧೇಯಕವನ್ನು 1968ರಲ್ಲೇ ಲೋಕಸಭೆ ಮುಂದೆ ಬಂದಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 2011ರಲ್ಲಿ ಮೊದಲ ಬಾರಿಗೆ ಈ ವಿಧೇಯಕ ಕುರಿತು ಲೋಕಸಭೆಯಲ್ಲಿ ಚರ್ಚೆ ಮಾಡಲಾಯಿತು. ಆಗ ವಿಧೇಯಕದಲ್ಲಿನ ಪ್ರಮುಖ ಅಂಶಗಳನ್ನೆಲ್ಲ ತೆಗೆದು ಬಲಹೀನ ಮಾಡಿದರು. 

ಬಳಿಕ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲಂತೂ ಈ ವಿಧೇಯಕವನ್ನು ಮತ್ತಷ್ಟು ದುರ್ಬಲಗೊಳಿಸಲಾಗಿದೆ ಎಂದರು. ಲೋಕಪಾಲ್ ವಿಧೇಯಕದಲ್ಲಿ ಪ್ರತಿ ಸರ್ಕಾರಿ ಅಧಿಕಾರಿ ಹಾಗೂ ಅವರ ಪತ್ನಿ, ಮಕ್ಕಳ ಹೆಸರಿನಲ್ಲಿನ ಆಸ್ತಿಗಳನ್ನು ಪ್ರತಿ ವರ್ಷ ಮಾ.31ರೊಳಗೆ ಘೋಷಣೆ ಮಾಡುವ ಅಂಶವಿತ್ತು. ಆದರೆ, ಮೋದಿ ಸರ್ಕಾರ ಅದೆಲ್ಲವನ್ನೂ ತೆಗೆದು ಹಾಕಿ ದುರ್ಬಲಗೊಳಿಸಿ, ಒಂದು ದಿನ ಲೋಕಸಭೆ, ಒಂದು ದಿನ ರಾಜ್ಯ ಸಭೆಯಲ್ಲಿ ಜಾರಿ ಮಾಡಿ, ಚರ್ಚೆಗೂ ಅವಕಾಶ ಕೊಡದೆ ಅಶಕ್ತ ವಿಧೇಯಕವನ್ನು ರಾಷ್ಟ್ರಪತಿಗಳ ಅಂಕಿತ ಹಾಕಿಸಿ ಜಾರಿಗೊಳಿಸಿದೆ ಎಂದು ಹೇಳಿದರು. ಲೋಕಪಾಲ್ ವಿಧೇಯಕ, ರೈತರ ಆತ್ಮಹತ್ಯೆ ತಡೆ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ಚುನಾವಣೆ ಸುಧಾರಣೆ ಅಂಶಗಳನ್ನು ಮುಂದಿಟ್ಟುಕೊಂಡು  ಮಾ.23ರಂದು ಮತ್ತೆ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಆರಂಭಿಸಲಿದ್ದೇನೆ. ದೇಶದ ಜನ 08879069688 ನಂಬರ್‌ಗೆ ಮಿಸ್‌ಕಾಲ್ ಕೊಡುವ ಮೂಲಕ ಬೆಂಬಲಿಸಬಹುದು ಎಂದರು.

ದೆಹಲಿ ಭ್ರಷ್ಟಾಚಾರ ಮುಕ್ತವಾಯಿತಾ?: ‘ಲೋಕಪಾಲ್ ಜಾರಿಗಾಗಿ ನಡೆಸಿದ ಹೋರಾಟದ ಲಾಭ ಪಡೆದು ದೆಹಲಿಯಲ್ಲಿ ಗದ್ದುಗೆಯನ್ನೇರಿದ ಅರವಿಂದ ಕೇಜ್ರಿವಾಲ್ ಅವರಿಂದ ದೆಹಲಿ ರಾಜ್ಯ ಭ್ರಷ್ಟಾಚಾರಮುಕ್ತವಾಗಿದೆಯಾ? ಎಂಬ ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವನಿಗೆ ನಾನು ಪಕ್ಷ ಕಟ್ಟಬೇಡ ಎಂದಿದ್ದೆ. ನನ್ನ ಮಾತು ಕೇಳಲಿಲ್ಲ. ಹೀಗಾಗಿ, ಈಗ ಅರ್ಧಕ್ಕೂ ಹೆಚ್ಚು ಮಂತ್ರಿಗಳು ಮನೆಗೆ ಹೋಗಿದ್ದಾರೆ ಎಂದರು.

ಉದ್ಯಮಿಗಳ ಸಾಲ ಕೇಳಲ್ಲ ರೈತರ ಸಾಲ ಯಾಕೆ ಕೇಳ್ತಾರೆ?: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಜಯ ಮಲ್ಯ ಅವರಂಥ ಉದ್ಯಮಿಗಳು ಮಾಡಿದ ಕೋಟ್ಯಂತರ ರು. ಸಾಲವನ್ನು ಬಾರದ ಸಾಲವೆಂದು ಪರಿಗಣಿಸಿ, ಪಕ್ಕಕ್ಕೆ ಇಡುತ್ತಾರೆ. ಅದೇ ರೀತಿ ರೈತರ ಸಾಲವನ್ನೂ ಯಾಕೆ ಬಾರದ ಸಾಲ ಎಂದು ಪರಿಗಣಿಸಬಾರದು? ಎಂದು ಪ್ರಶ್ನಿಸಿ ವಿ.ಬಿ. ರಡ್ಡೇರ ಗಮನ ಸೆಳೆದರು.

Follow Us:
Download App:
  • android
  • ios