Asianet Suvarna News Asianet Suvarna News

ಲೈಂಗಿಕ ಶಕ್ತಿ ವೃದ್ಧಿಗಾಗಿ ಉಡದ ಗುಪ್ತಾಂಗ ಕಳ್ಳಸಾಗಣೆ

ಗಂಡು ಉಡಗಳನ್ನು ಸಾಯಿಸಿ ಅವುಗಳ ಗುಪ್ತಾಂಗ ತೆಗೆದು ಮಾರಾಟ ಮಾಡುತ್ತಿದ್ದ ಜಾಲ ಪತ್ತೆ ಹಚ್ಚುವಲ್ಲಿ ಚಿಕ್ಕಮಗಳೂರು ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಈ ಜಾಲದಲ್ಲಿದ್ದ ಶಿವಮೊಗ್ಗ ಮೂಲದ ಇಬ್ಬರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. 

Animal Smuggler Arrested In Chikmagalur
Author
Bengaluru, First Published Sep 30, 2018, 8:27 AM IST

ಚಿಕ್ಕಮಗಳೂರು :  ಗಂಡು ಉಡಗಳನ್ನು ಸಾಯಿಸಿ ಅವುಗಳ ಗುಪ್ತಾಂಗ ತೆಗೆದು ಮಾರಾಟ ಮಾಡುತ್ತಿದ್ದ ಜಾಲ ಪತ್ತೆ ಹಚ್ಚುವಲ್ಲಿ ಚಿಕ್ಕಮಗಳೂರು ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಈ ಜಾಲದಲ್ಲಿದ್ದ ಶಿವಮೊಗ್ಗ ಮೂಲದ ಇಬ್ಬರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಅಲ್ಲದೆ, ಆರೋಪಿಗಳಿಂದ 49 ಉಡಗಳ ಗುಪ್ತಾಂಗ ವಶಕ್ಕೆ ಪಡೆಯಲಾಗಿದೆ.

ದಕ್ಷಿಣ ಭಾರತದಲ್ಲೇ ಇದು ಪ್ರಥಮ ಪ್ರಕರಣವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಜಾಲ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತಿದೆ. ಬಂಧಿತರಿಂದ ವಶಕ್ಕೆ ತೆಗೆದುಕೊಳ್ಳಲಾಗಿರುವ ಮೊಬೈಲ್‌ಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಶಿಲ್ಪಾ ತಿಳಿಸಿದ್ದಾರೆ.

ಡೆಹ್ರಾಡೂನ್‌ನಲ್ಲಿರುವ ವೈಲ್ಡ್‌ಲೈಫ್‌ ಕ್ರೈಂ ಕಂಟ್ರೋಲ್‌ ಬ್ಯೂರೋ (ಡಬ್ಲ್ಯೂಸಿಸಿಬಿ) ಆ್ಯಪ್‌ ಒಂದನ್ನು ಸಿದ್ಧಪಡಿಸಿದ್ದು, ನಮ್ಮ ದೇಶದಿಂದ ಹೊರ ದೇಶಗಳಿಗೆ ಕಾಡು ಪ್ರಾಣಿಗಳು ಹಾಗೂ ಉತ್ಪನ್ನಗಳು ಸಾಗಾಣಿಕೆ ಆಗುತ್ತಿರುವುದನ್ನು ಈ ಆ್ಯಪ್‌ನಲ್ಲಿ ಪತ್ತೆ ಹಚ್ಚಲಾಗುತ್ತದೆ. ಡಬ್ಲ್ಯೂಸಿಸಿಬಿ ಕೊಟ್ಟಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಮೊದಲಿಗೆ ಶಾಹಿದ್‌ ಎಂಬಾತನನ್ನು ಸಂಪರ್ಕಿಸಿ ಉಡಗಳ ಗುಪ್ತಾಂಗ ಖರೀದಿಸಲು ಬಂದಿರುವುದಾಗಿ ಹೇಳಿದ್ದರು. ಆತ ಚಿಕ್ಕಮಗಳೂರಿಗೆ ಬರುವಂತೆ ತಿಳಿಸಿದ್ದ. ನಗರಕ್ಕೆ ಬಂದು ಆತನನ್ನು ಭೇಟಿ ಮಾಡಿ ಮಾತುಕತೆ ನಡೆಸಿದಾಗ ತನ್ನ ತಮ್ಮ ನೌಶದ್‌ ದತ್ತಪೀಠದಲ್ಲಿ ಗಿಡಮೂಲಿಕೆ ಅಂಗಡಿ ಇಟ್ಟುಕೊಂಡಿದ್ದು, ಆತನನ್ನು ಸಂಪರ್ಕಿಸಿದರೆ ಉಡದ ಗುಪ್ತಾಂಗಗಳು ಸಿಗುತ್ತವೆ ಎಂದು ಶಾಹಿದ್‌ ತಿಳಿಸಿದ್ದ.

ಈ ಮಾಹಿತಿ ಆಧರಿಸಿ ನೌಶದ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಶಿವಮೊಗ್ಗದ ಹಕ್ಕಿಪಿಕ್ಕಿ ಕಾಲೋನಿಯ ಕೇಮ ಮತ್ತು ಅವರ ಪತ್ನಿ ಸುಧಾರಲ್ಲಿ ಸಿಗುತ್ತವೆ ಎಂದು ಹೇಳಿದ್ದ. ಇದನ್ನೇ ಆಧರಿಸಿ ಚಿಕ್ಕಮಗಳೂರಿನ ಬಸ್‌ ನಿಲ್ದಾಣದಲ್ಲಿ ಉಡಗಳ ಗುಪ್ತಾಂಗ ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ 49 ಉಡಗಳ ಅಂಗಾಂಗಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಬಂಧಿತರನ್ನುವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಹತಿ ಜೋಡಿ

ವಶಕ್ಕೆ ತೆಗೆದುಕೊಂಡಿರುವ ಗಂಡು ಉಡಗಳ ಗುಪ್ತಾಂಗಕ್ಕೆ ಹತಿ ಜೋಡಿ (ಎರಡು ಕೈಗಳು ಒಟ್ಟಿಗೆ ಸೇರಿದ ಆಕೃತಿ) ಎಂದು ಈ ಜಾಲ ಕರೆಯುತ್ತಿತ್ತು. ಶಿವಮೊಗ್ಗ , ಚಿಕ್ಕಮಗಳೂರು ಸೇರಿ ಪಶ್ಚಿಮಘಟ್ಟಪ್ರದೇಶದಲ್ಲಿ ಗಂಡು ಉಡಗಳನ್ನು ಸಾಯಿಸಿ ಅವುಗಳ ಒಳಗಿರುವ ಹತಿ ಜೋಡಿ ಆಕೃತಿಯ ಮೂಳೆ ತೆಗೆದು ಮಾರಾಟ ಮಾಡಲಾಗುತ್ತಿತ್ತು. ಉಡದ ಅಂಗಾಂಗ ಕಟ್ಟಿಸಿಕೊಂಡರೆ ಯಾವುದೇ ರೋಗಗಳು ಬರುವುದಿಲ್ಲ ಎಂಬ ನಂಬಿಕೆ ಹಾಗೂ ಗಂಡು ಉಡಗಳ ಅಂಗಾಂಗಗಳಿಂದ ಔಷಧ ತಯಾರಿಕೆಗಾಗಿ ಕೆಲವರು ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ.

Follow Us:
Download App:
  • android
  • ios