ಇಬ್ಬರು ಕಲಾವಿದರು ತಮಗೆ ಈಜು ಬರಲ್ಲ ಅಂದಾಗಲೂ ಅವರನ್ನು ನೀರಿಗೆ ಇಳಿಸುವುದು ಹೇಗೆಂದು ಪರಿಶೀಲಿಸಬೇಕಿತ್ತು. ಇಲ್ಲವೇ ಕನಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನಾದರೂ ತೆಗೆದುಕೊಳ್ಳಬೇಕಿತ್ತು.
ಬೆಂಗಳೂರು(ನ.16):ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಮೃತರಾದ ಅನಿಲ್ ಹಾಗೂ ಉದಯ್‌ರ ಕುಟುಂಬಳಿಗೆ ಅಶ್ರಯ ಯೋಜನೆಯಡಿ ನಿವೇಶನ ಒದಗಿಸಲು ಚಿಂತನೆ ನಡೆಸಿರುವುದಾಗಿ ಶಾಸಕ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹೇಳಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೆ ಖಂಡಿತ ದುರಂತ ಸಂಭವಿಸುತ್ತಿರಲಿಲ್ಲ. ಈಗ ಏನೇ ಮಾತನಾಡಿದರೂ ಹೋದವರು ಬರುವುದಿಲ್ಲ. ಆದರೆ, ಅವರನ್ನೇ ನಂಬಿಕೊಂಡಿದ್ದ ಕುಟುಂಬಗಳಿಗಾದರೂ ಚಿತ್ರೋದ್ಯಮ ನೆರವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಜತೆ ಮಾತನಾಡಿ ಅಶ್ರಯ ಯೋಜನೆಯಡಿ ಎರಡು ಕುಟುಂಬಗಳಿಗೂ ನಿವೇಶನ ಒದಗಿಸುವ ಭರವಸೆ ನೀಡಿದರು.
ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮುನಿರತ್ನ, ‘‘ಇಬ್ಬರು ಕಲಾವಿದರು ತಮಗೆ ಈಜು ಬರಲ್ಲ ಅಂದಾಗಲೂ ಅವರನ್ನು ನೀರಿಗೆ ಇಳಿಸುವುದು ಹೇಗೆಂದು ಪರಿಶೀಲಿಸಬೇಕಿತ್ತು. ಇಲ್ಲವೇ ಕನಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನಾದರೂ ತೆಗೆದುಕೊಳ್ಳಬೇಕಿತ್ತು. ‘ದೇವರೇ ದಿಕ್ಕು’ ಎಂದುಕೊಂಡು ನೀರಿಗೆ ಬಿದ್ದವರು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ,’’ ಎಂದು ಪ್ರಶ್ನಿಸಿದರು.
ಹೊಸ ನೀತಿ:
ನಿರ್ಮಾಪಕನಾದವನು ನಿರ್ದೇಶಕ ಕೇಳಿದ್ದನ್ನು ಕೊಡುತ್ತಾನೆ. ಆದರೆ, ಇಂಥ ದುರಂತಗಳು ಸಂಭವಿಸಿದಾಗ ನಿರ್ಮಾಪಕರನ್ನೇ ದೂರುತ್ತಾರೆ. ನಿರ್ದೇಶಕನಿಗೆ ಆ ಬಗ್ಗೆ ತಿಳಿವಳಿಕೆ ಇರಲಿಲ್ಲವೇ? ಈ ಪ್ರಕರಣ ಚಿತ್ರರಂಗಕ್ಕೆ ಒಂದು ಎಚ್ಚರಿಕೆಯ ಗಂಟೆ. ಹೀಗಾಗಿ ಮುಂದೆ ಇಂಥ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಚಿತ್ರೋದ್ಯಮದ ಎಲ್ಲ ಅಂಗಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ನೀತಿ ರೂಪಿಸುತ್ತಿದ್ದೇವೆ. ಅಪಾಯಕಾರಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾಡುವಾಗ ನಿರ್ದೇಶಕರು, ನಿರ್ಮಾಪಕರ ಗಮನಕ್ಕೆ ತಂದು ಜೀವ ವಿಮೆ ಮಾಡಿಸಿಕೊಳ್ಳಬೇಕು. ಜತೆಗೆ ಇಂಥ ದುರಂತವಾದಾಗ ಅದರ ಹೊಣೆಯನ್ನು ಚಿತ್ರದ ಕ್ಯಾಪ್ಟನ್ ಎನಿಸಿಕೊಂಡಿರುವ ನಿರ್ದೇಶಕನೇ ಹೊರಬೇಕು. ಈ ವಿಚಾರದಲ್ಲಿ ನಿರ್ಮಾಪಕನಿಗೆ ಯಾವುದೇ ಸಂಬಂಧ ಇರದು. ಈ ಬಗ್ಗೆ ಇನ್ನಷ್ಟ ಸ್ಪಷ್ಟ ನಿರ್ಧಾರಗಳನ್ನು ಸದ್ಯದಲ್ಲೇ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಲಾವಿದರ ಸಂಘದ ರಾಕ್‌ಲೈನ್ ವೆಂಕಟೇಶ್ ಮಾತನಾಡಿ, ದುರಂತದ ಬಗ್ಗೆ ಎಲ್ಲರಿಗೂ ನೋವಿದೆ. ನೀತಿ-ನಿಮಯಗಳ ಆಚೆಗೆ ಮಾನವೀಯತೆಯಿಂದ ನಾವು ಈಗಾಗಲೇ ಆ ಕುಟುಂಬಗಳಿಗೆ ನೇರವಾಗುತ್ತಿದ್ದೇವೆ. ಇಡೀ ಉದ್ಯಮ ಒಟ್ಟಾಗಿ ಯಾವ ರೀತಿಯಲ್ಲಿ ನೇರವು ನೀಡಬೇಕು ಮತ್ತು ಇಂಥ ದುರಂತಗಳು ಸಂಭವಿಸಿದಾಗ ಕಲಾವಿದರಿಗೆ, ತಂತ್ರಜ್ಞರಿಗೆ ಆರ್ಥಿಕವಾಗಿ ಹೇಗೆ ನೇರವು ನೀಡಬೇಕು ಎಂಬುದರ ಬಗ್ಗೆ ಚರ್ಚಿಸಲು ಸದ್ಯದಲ್ಲೇ ಹಿರಿಯ ನಟ ಅಂಬರೀಶ್ ನೇತೃತ್ವದಲ್ಲಿ ಇಡೀ ಚಿತ್ರೋದ್ಯಮ ಸಭೆ ಸೇರಲಿದೆ. ಆ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಸಾ ರಾ ಗೋವಿಂದು ಮಾತನಾಡಿ, ಅಂದು ಘಟನೆ ಹೇಗಾಯಿತು? ಯಾರಿಂದ ತಪ್ಪಾಯಿತು? ಎಂಬುದರ ಬಗ್ಗೆ ಚಿತ್ರತಂಡದ ಜತೆ ಮಾತನಾಡಬೇಕಿದೆ. ಇದರಿಂದ ಪಾಠ ಕಲಿತಿರುವ ನಾವು, ಚಿತ್ರೋದ್ಯಮದ ನಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದೇವೆ ಎಂದು ತಿಳಿಸಿದರು. ಚಿತ್ರೋದ್ಯಮದ ಪ್ರಮುಖರಾದ ಎನ್ ಎಂ ಸುರೇಶ್, ಸೂರಪ್ಪ ಬಾಬು, ಜೆ ಜೆ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
