ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ ಬರೋಬ್ಬರಿ 10 ಸಾವಿರ ಕೋಟಿ ರು. ಮಾನಹಾನಿ ಮೊಕದ್ದಮೆಯನ್ನು ಎನ್ ಡಿ ಟಿವಿ ವಿರುದ್ಧ ದಾಖಲಿಸಿದೆ. 

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ವರದಿ ಪ್ರಸಾರ ಮಾಡಿದ ಖಾಸಗಿ ಸ್ವಾಮ್ಯದ ಎನ್‌ಡಿಟೀವಿ ಸುದ್ದಿವಾಹಿನಿ ವಿರುದ್ಧ ರಫೇಲ್‌ನ ಪಾಲುದಾರ ಕಂಪನಿ, ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ ಬರೋಬ್ಬರಿ 10 ಸಾವಿರ ಕೋಟಿ ರು. ಮಾನಹಾನಿ ಮೊಕದ್ದಮೆ ದಾಖಲಿಸಿದೆ.

ರಫೇಲ್‌ ಯುದ್ಧ ವಿಮಾನ ಒಪ್ಪಂದ ಕುರಿತಂತೆ ಸೆ.29ರಂದು ಎನ್‌ಡಿಟೀವಿ ‘ಟ್ರೂಥ್‌ ವರ್ಸಸ್‌ ಹೈಪ್‌’ ಎಂಬ ವಾರಕ್ಕೊಮ್ಮೆ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಚರ್ಚೆ ನಡೆಸಿತ್ತು. ಈ ಕಾರ್ಯಕ್ರಮದ ಕುರಿತಂತೆ ಗುಜರಾತಿನ ಅಹಮದಾಬಾದ್‌ ನ್ಯಾಯಾಲಯದಲ್ಲಿ ಅನಿಲ್‌ ಅಂಬಾನಿ ಕಂಪನಿ ಮೊಕದ್ದಮೆ ಹೂಡಿದ್ದು, ಅ.26ರಂದು ವಿಚಾರಣೆಗೆ ಬರಲಿದೆ.

ರಫೇಲ್‌ ವಿಮಾನಗಳನ್ನು ಉತ್ಪಾದಿಸುವ ಡಸಾಲ್ಟ್‌ ಏವಿಯೇಷನ್‌ ಕಂಪನಿಯ ಭಾರತೀಯ ಪಾಲುದಾರ ಕಂಪನಿ ರಿಲಯನ್ಸ್‌ ಆಗಿದೆ. ರಿಲಯನ್ಸ್‌ ಕಂಪನಿ ತಮ್ಮ ಆಯ್ಕೆ ಆಗಿರಲಿಲ್ಲ ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಅವರು ಹೇಳಿದ್ದರು. ಡಸಾಲ್ಟ್‌ ಕಂಪನಿಯ ಆಂತರಿಕ ವರದಿಯಲ್ಲೂ ಈ ಬಗ್ಗೆ ಉಲ್ಲೇಖವಿತ್ತು.

ರಫೇಲ್‌ ಕುರಿತು ತಮ್ಮ ವಿರುದ್ಧ ವರದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಅಂಬಾನಿ ಈ ರೀತಿ ಮೊಕದ್ದಮೆ ಹೂಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಆಗಸ್ಟ್‌ನಲ್ಲಿ ಕಾಂಗ್ರೆಸ್‌ ಒಡೆತನದ ‘ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆ ವಿರುದ್ಧ 5 ಸಾವಿರ ಕೋಟಿ ರು. ಮೊಕದ್ದಮೆ ದಾಖಲಿಸಿದ್ದರು.

ಅಂಬಾನಿ ನಡೆ ಕುರಿತು ಪ್ರತಿಕ್ರಿಯಿಸಿರುವ ಎನ್‌ಡಿಟೀವಿ, ವಾಸ್ತವಾಂಶಗಳನ್ನು ಮುಚ್ಚಿಡುವ ಹಾಗೂ ಮಾಧ್ಯಮ ತನ್ನ ಕೆಲಸ ಮಾಡದಂತೆ ತಡೆಯುವ ಯತ್ನ ಇದಾಗಿದೆ. ಸೆ.29ರ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಚಾನೆಲ್‌ ವತಿಯಿಂದ ಮನವಿ ಮಾಡಿದ್ದರೂ ರಿಲಯನ್ಸ್‌ ಕಂಪನಿ ನಿರ್ಲಕ್ಷಿಸಿತ್ತು ಎಂದು ಹೇಳಿದೆ.