ಭುವನೇಶ್ವರ: ಅಂಗನವಾಡಿ ಸಹಾಯಕಿಯಾದ ಸಾಮಾನ್ಯ ಮಹಿಳೆಯೊಬ್ಬರು ಇದೀಗ ಸಂಸದೆಯಾದ ಯಶೋಗಾಥೆ ಒಡಿಶಾದಲ್ಲಿ ನಡೆದಿದೆ. ಪ್ರಮೀಳಾ ಬಿಸೋಯಿ(70) ಎಂಬುವರೇ ಲೋಕಸಭೆಗೆ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆ

ರಾಜ್ಯ ಸರ್ಕಾರದ ಸ್ವಸಹಾಯ ಸಂಘದ ಮಿಷನ್‌ ಶಕ್ತಿ ಯೋಜನೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಮೀಳಾ ಬಿಸೋಯಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ತಾವು ಹಾಗೂ ತಮ್ಮ ತಂದೆ ಈ ಹಿಂದೆ ಸ್ಪರ್ಧಿಸಿದ್ದ ಅಸ್ಕಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಅವರು ಕರೆ ಮಾಡಿ ವಿನಂತಿಸಿದ್ದರು. ಆದರೆ, ರಾಜ್ಯ ರಾಜಧಾನಿ ಭುವನೇಶ್ವರ್‌ಗೆ ಕಾರಿನಲ್ಲಿ ಬರಲು ಸಹ ಹಣವಿಲ್ಲದ ಕಾರಣಕ್ಕಾಗಿ, ಚುನಾವಣಾ ಅಖಾಡಕ್ಕಿಳಿಯಲು ಬಿಸೋಯಿ ಅವರು ಹಿಂದೇಟು ಹಾಕಿದ್ದರು. ಇದನ್ನು ಅರಿತ ಸಿಎಂ ಪಟ್ನಾಯಕ್‌ ಸ್ವತಃ ಕಾರನ್ನು ಕಳುಹಿಸಿ ಬಿಸೋಯಿ ಅವರನ್ನು ಭುವನೇಶ್ವರ್‌ಗೆ ಕರೆಸಿ ಕೊಂಡಿದ್ದರು. ಆಗಲೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಬಿಸೋಯಿ ಹಟ ಹಿಡಿದಿದ್ದರು.

ಆದಾಗ್ಯೂ, ಪಟ್ನಾಯಕ್‌ ಅವರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿ 2 ಲಕ್ಷ ಮತಗಳ ಅಂತರದಿಂದ ಗೆದ್ದು ಲೋಕಸಭೆಗೆ ಆಯ್ಕೆಯಾಗಿರುವ ಬಿಸೋಯಿ ಅವರು ಕಲಾಪದಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ದೆಹಲಿ ವಿಮಾನ ಪ್ರಯಾಣಕ್ಕೆ ಸಿದ್ಧತೆ ನಡೆಸಿದ್ದಾರೆ.

ಬಡ ರೈತ ಕುಟುಂಬದವರಾದ ಪ್ರಮೀಳಾ ಬಿಸೋಯಿ ಹಾಗೂ ಅವರ ಪತಿ ಸರ್ಕಾರಿ ನೌಕರರು. ಆಕೆಯ ಹಿರಿಯ ಪುತ್ರ ಗ್ರಾಮದಲ್ಲೇ ಚಹಾ ಅಂಗಡಿ ಇಟ್ಟುಕೊಂಡಿದ್ದು, ಕಿರಿಯ ಮಗ ಬೈಕ್‌ ಗ್ಯಾರೇಜ್‌ ಇಟ್ಟುಕೊಂಡಿದ್ದಾನೆ. ನಿರುದ್ಯೋಗದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅವರು, ಸಣ್ಣ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ಯೋಜನೆ ಹೊಂದಿದ್ದಾರೆ.