ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲವೆಂಬ ಕಾರಣಕ್ಕೆ ಆಂಧ್ರ ಮಾಜಿ ಸಿಎಂ ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದಿದ್ದಲ್ಲದೇ, ಮೋದಿ ಸರಕಾರದೊಂದಿಗೆ ಮುನಿಸು ತೋರಿದ್ದರು. ಇದೀಗ ಜಗನ್ ಕೇಂದ್ರದ ಆಫರ್ ತಿರಸ್ಕರಿಸುವ ಮೂಲಕ ತಮ್ಮ ಸಿಟ್ಟು ತೋರ್ಪಡಿಸಿದ್ದಾರೆ.
ನವದೆಹಲಿ (ಜೂ.24): ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಬಿಜೆಪಿಯಿಂದ ಇದುವರೆಗೆ ಯಾವುದೇ ಖಚಿತ ಭರವಸೆ ಸಿಗದ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿನ ಉಪಸ್ಪೀಕರ್ ಹುದ್ದೆ ವಹಿಸಿಕೊಳ್ಳುವಂತೆ ಎನ್‌ಡಿಎ ನೀಡಿದ್ದ ಆಹ್ವಾನವನ್ನು ವೈಎಸ್‌ಆರ್ ಕಾಂಗ್ರೆಸ್ ನಾಯಕ ಜಗನ್ಮೋಹನ್ ರೆಡ್ಡಿ ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಉಪಸ್ಪೀಕರ್ ಹುದ್ದೆ ವಹಿಸಿಕೊಂಡರೆ ಅದು ಎನ್‌ಡಿಎ ಜೊತೆ ಗುರುತಿಸಿಕೊಂಡಂತೆ ಆಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಖಚಿತ ಭರವಸೆ ಸಿಗುವವರೆಗೂ ಎನ್‌ಡಿಎ ಮತ್ತು ವಿಪಕ್ಷಗಳಿಂದ ಸಮಾನದೂರ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. 22 ಸ್ಥಾನ ಗೆದ್ದಿರುವ ವೈಎಸ್‌ಆರ್‌ಸಿ 4ನೇ ಅತಿದೊಡ್ಡ ಪಕ್ಷವಾಗಿದೆ.
