ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಸ್ನೋಟಿಕರ್ ಪಕ್ಷೇತರ ಅಭ್ಯರ್ಥಿ ಸತೀಶ ಸೈಲ್ ಎದುರು ಪರಾಭವಗೊಂಡಿದ್ದರು
ಕಾರವಾರ(ನ.08): ಚುನಾವಣೆ ಎದುರಿಸಿ ಪ್ರಥಮ ಪ್ರಯತ್ನದಲ್ಲೇ ಗೆದ್ದು ಸಚಿವರಾಗಿದ್ದ ಆನಂದ ಅಸ್ನೋಟಿಕರ್ ಇದೀಗ ಜೆಡಿಎಸ್ ಪಾಳೆಯ ಸೇರುವ ಚಿಂತನೆ ನಡೆಸುತ್ತಿರುವ ಬಗ್ಗೆ ಅವರ ಆಪ್ತವಲಯದಲ್ಲಿ ಸುದ್ದಿ ಹರಿದಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಸ್ನೋಟಿಕರ್ ಪಕ್ಷೇತರ ಅಭ್ಯರ್ಥಿ ಸತೀಶ ಸೈಲ್ ಎದುರು ಪರಾಭವಗೊಂಡಿದ್ದರು.
ಆ ಬಳಿಕ ಸಾರ್ವಜನಿಕ ವಲಯದಿಂದ ದೂರ ಉಳಿದಿದ್ದ ಅವರು ತಮ್ಮ ಉದ್ಯಮವನ್ನು ನೋಡಿಕೊಂಡು ತಮ್ಮ ಪಾಡಿಗಿದ್ದರು.
ಚುನಾವಣೆ ಹತ್ತಿರ ಬರುತ್ತಿರುವುದರಿಂದ ಇನ್ನೂ ವಿಳಂಬ ಮಾಡಿದರೆ ಕ್ಷೇತ್ರದಲ್ಲಿ ಹಿಡಿತ ಸಾಧಿಸುವುದು ಕಷ್ಟ ಎಂದು ಮನಗಂಡಿರುವ ಆನಂದ್ ಅಸ್ನೋಟಿಕರ್ ಕ್ಷೇತ್ರದಲ್ಲಿ ಸಕ್ರಿಯರಾಗುವುದಾಗಿ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಸಮ್ಮಿಶ್ರ ಸರ್ಕಾರ ರಚನೆಯಾದಲ್ಲಿ ಬಿಜೆಪಿಗಿಂತ ಜೆಡಿಎಸ್ ಮೇಲು ಎನ್ನುವ ಅಭಿಪ್ರಾಯಕ್ಕೆ ಅವರು ಬಂದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಅಸ್ನೋಟಿಕರ್, ಸಕ್ರಿಯ ರಾಜಕಾರಣಕ್ಕೆ
ಮರಳುವುದು ನಿಶ್ಚಿತವಾಗಿದ್ದು ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಪಕ್ಷ ಯಾವುದೆಂಬ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

