ಮುಂಬರುವ ವಿಧಾನಸಭಾ ಚುನಾವಣೆಯ ರಣತಂತ್ರ ರೂಪಿಸುವ ಸಂಬಂಧ ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸನ್ನದ್ಧಗೊಳಿಸುವ ಉದ್ದೇಶದಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾನುವಾರ ನಗರದಲ್ಲಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಬೆಂಗಳೂರು (ಡಿ.31): ಮುಂಬರುವ ವಿಧಾನಸಭಾ ಚುನಾವಣೆಯ ರಣತಂತ್ರ ರೂಪಿಸುವ ಸಂಬಂಧ ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸನ್ನದ್ಧಗೊಳಿಸುವ ಉದ್ದೇಶದಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾನುವಾರ ನಗರದಲ್ಲಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಶಾ ಅವರು ಯಲಹಂಕ ಬಳಿಯ ರೆಸಾರ್ಟ್‌ವೊಂದರಲ್ಲಿ ಸಂಜೆವರೆಗೂ ಸರಣಿ ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಚುನಾವಣಾ ದಿಕ್ಸೂಚಿ ಅಂತಿಮಗೊಳಿಸಲಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿದ್ದ ಅವರು ಪಕ್ಷದ ಎಲ್ಲ ವಿಭಾಗಗಳಿಗೂ ನಿರ್ದಿಷ್ಟ ಗುರಿ ನೀಡಿದ್ದರು. ಇದೀಗ ಅವುಗಳ ಕತೆ ಏನಾಯಿತು ಎಂಬುದರ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಜೊತೆಗೆ ಮುಂದೇನು ಮಾಡಬೇಕು ಎಂಬುದರ ಹೊಸ ಕೆಲಸವನ್ನೂ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಅಮಿತ್ ಶಾ ಅವರ ಆಪ್ತರಾಗಿರುವ ರಾಷ್ಟ್ರೀಯ ಮುಖಂಡರಾಗಿರುವ ಅರುಣ್ ಸಿಂಗ್, ಭೂಪೇಂದ್ರ ಯಾದವ್ ಅವರು ನಗರಕ್ಕೆ ಆಗಮಿಸಿ ಸಮಗ್ರ ರಾಜಕೀಯ ಬೆಳವಣಿಗೆಗಳ ಮಾಹಿತಿ ಸಂಗ್ರಹಿಸಿದ್ದಾರೆ.
ಜತೆಗೆ ಕೇಂದ್ರದ ಸಚಿವರೂ ಆಗಿರುವ ಪಕ್ಷದ ಚುನಾ ವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಕೂಡ ಶನಿವಾರವೇ ಆಗಮಿಸಿ ಪೂರ್ವ ಸಿದ್ಧತೆಗಳ ಅವಲೋಕನ ನಡೆಸಿದರು. ಇವರೆಲ್ಲರ ವರದಿ ಮುಂದಿ ಟ್ಟುಕೊಂಡು ಅಮಿತ್ ಶಾ ಪರಿಶೀಲನೆ ನಡೆಸಲಿದ್ದಾರೆ.
ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ತುಸು ಬೇಸರವನ್ನೇ ಹೊಂದಿರುವ ಅಮಿತ್ ಶಾ ಅವರು ಎಲ್ಲ ಮುಖಂಡರಿಗೆ ಕ್ಲಾಸ್ ತೆಗೆದುಕೊಳ್ಳುವುದು ನಿಶ್ಚಿತವಾ ಗಿದೆ. ಜತೆಗೆ ಪರಿವರ್ತನಾ ಯಾತ್ರೆ ಆರಂಭವಾಗುವ ಮೊದಲ ದಿನ ಸಮಾವೇಶ ವಿಫಲಗೊಂಡಿರುವುದರ ಜೊತೆಗೆ ಅಲ್ಲಲ್ಲಿ ಕೆಲವೆಡೆ ಯಾತ್ರೆ ವೇಳೆ ನಡೆದಿರುವ ಅಹಿತಕರ ಘಟನೆಗಳ ಬಗ್ಗೆಯೂ ಮುಖಂಡರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
