ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗಾಗಿ ಬೆಂಗಳೂರಿನಲ್ಲಿ ಒಟ್ಟು ಮೂರು ಮನೆಗಳನ್ನು ಅಂತಿಮಗೊಳಿಸಲಾಗಿದ್ದು, ಬರುವ ಏಪ್ರಿಲ್‌ ಮೊದಲ ವಾರದಿಂದ ಇಲ್ಲಿಯೇ ಠಿಕಾಣಿ ಹೂಡುವ ಸಾಧ್ಯತೆಯಿದೆ.

ವಿಜಯ್‌ ಮಲಗಿಹಾಳ

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗಾಗಿ ಬೆಂಗಳೂರಿನಲ್ಲಿ ಒಟ್ಟು ಮೂರು ಮನೆಗಳನ್ನು ಅಂತಿಮಗೊಳಿಸಲಾಗಿದ್ದು, ಬರುವ ಏಪ್ರಿಲ್‌ ಮೊದಲ ವಾರದಿಂದ ಇಲ್ಲಿಯೇ ಠಿಕಾಣಿ ಹೂಡುವ ಸಾಧ್ಯತೆಯಿದೆ.

ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಮಿತ್‌ ಶಾ ಅವರು ಶತಾಯಗತಾಯ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ರಣತಂತ್ರ ರೂಪಿಸುತ್ತಿರುವುದರಿಂದ ರಾಜಧಾನಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡುವುದು ಸೂಕ್ತ ಎಂಬ ನಿಲುವಿಗೆ ಬಂದಿದ್ದಾರೆ.

ಹಾಗಂತ ಮತದಾನದ ಹಿಂದಿನ ದಿನದವರೆಗೂ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡುವುದಿಲ್ಲ. ಆಗಾಗ ದೆಹಲಿಗೆ ಹೋಗಿ ಬಂದರೂ ಹೆಚ್ಚು ದಿನಗಳ ಕಾಲ ಬೆಂಗಳೂರಿನಲ್ಲೇ ಇದ್ದು ಪಕ್ಷದ ಚುನಾವಣಾ ಸಿದ್ಧತೆಗಳ ಸಂಬಂಧ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಜತೆಗೆ ಅಮಿತ್‌ ಶಾ ಅವರು ಇಲ್ಲಿಯೇ ಇದ್ದು ನಿಗಾ ವಹಿಸಿದಲ್ಲಿ ರಾಜ್ಯ ಮುಖಂಡರು ಕೂಡ ಆಸ್ಥೆಯಿಂದ ತಮ್ಮ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂಬ ಭಾವನೆಯೂ ಇತರ ವರಿಷ್ಠ ನಾಯಕರಲ್ಲಿದೆ ಎಂದು ತಿಳಿದು ಬಂದಿದೆ.

ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯಲ್ಲೇ ಒಂದು ವಿಲ್ಲಾ ರೀತಿಯ ಬಂಗ್ಲೆಯನ್ನು ಹಲವು ತಿಂಗಳುಗಳ ಮುಂಚೆ ಅವರಿಗಾಗಿ ಆಯ್ಕೆ ಮಾಡಲಾಗಿತ್ತು. ನಂತರ ತೀರಾ ಇತ್ತೀಚೆಗೆ ನಗರದ ಕೇಂದ್ರ ಭಾಗದಲ್ಲೂ ಇರಲಿ ಎಂಬ ಕಾರಣಕ್ಕಾಗಿ ಒಂದು ಫ್ಲ್ಯಾಟ್‌ ಹಾಗೂ ಮನೆಯನ್ನು ಅಂತಿಮಗೊಳಿಸಲಾಗಿದೆ. ಈ ಮೂರರ ಪೈಕಿ ಅಮಿತ್‌ ಶಾ ಅವರು ಆಯಾ ಸಂದರ್ಭಕ್ಕೆ ಅನುಗುಣವಾಗಿ ಒಂದರಲ್ಲಿ ವಾಸ ಮಾಡುವ ಸಾಧ್ಯತೆಯಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಅಮಿತ್‌ ಶಾ ಅವರಿಗೆ ಭದ್ರತೆ ಒದಗಿಸುವುದೂ ಸವಾಲೇ ಆಗಿರುವುದರಿಂದ ಒಂದೇ ಮನೆ ನಿಗದಿಪಡಿಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನೂ ಭದ್ರತಾ ಸಿಬ್ಬಂದಿ ನೀಡಿದ್ದರು. ಹೀಗಾಗಿ ಮೂರು ಮನೆಗಳನ್ನು ಗುರುತಿಸಲಾಗಿದೆ. ಯಾವುದರಲ್ಲಿ ಬೇಕಾದರೂ ಇರಬಹುದು. ಬರುವ ಏಪ್ರಿಲ್‌ ಮೊದಲ ವಾರದಿಂದ ಈ ಮನೆಗಳನ್ನು ಅಮಿತ್‌ ಶಾ ಅವರು ಬಳಕೆ ಮಾಡುವ ನಿರೀಕ್ಷೆಯಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ಹಿರಿಯ ಮುಖಂಡರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ತಂತ್ರಗಾರಿಕೆ ಹೆಣೆಯುವುದಲ್ಲಿ ನಿಷ್ಣಾತರಾಗಿರುವ ಅಮಿತ್‌ ಶಾ ಅವರಿಗೆ ಪಕ್ಷದ ರಾಜ್ಯ ನಾಯಕರು ಹಾಗೂ ಚುನಾವಣೆಯಲ್ಲಿ ಭಾಗಿಯಾಗಿರುವ ರಾಷ್ಟ್ರೀಯ ಮುಖಂಡರೊಂದಿಗೆ ಸಂಪರ್ಕದಲ್ಲಿರುವ ಉದ್ದೇಶದಿಂದ ಐಷಾರಾಮಿ ಹೋಟೆಲ್‌ಗಳ ಬದಲು ಪ್ರತ್ಯೇಕ ಮನೆಗಳನ್ನೇ ಆಯ್ಕೆ ಮಾಡಲಾಗಿದೆ. ಇದರಿಂದ ವೆಚ್ಚವೂ ಕಡಿಮೆಯಾಗಲಿದೆ. ಜತೆಗೆ ಪಕ್ಷದ ಮುಖಂಡರೊಂದಿಗೆ ಸಭೆ, ಸಂವಾದ ನಡೆಸಲು ಖಾಸಗಿತನವೂ ಲಭಿಸಲಿದೆ. ಜತೆಗೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುವುದಕ್ಕೂ ಅನುಕೂಲವಾಗಲಿದೆ ಎಂದು ಆ ಮುಖಂಡರು ಅಭಿಪ್ರಾಯಪಟ್ಟರು.

ಉಸ್ತುವಾರಿಗಳಿಗೂ ಮನೆ

ಪಕ್ಷದ ಚುನಾವಣಾ ಉಸ್ತವಾರಿ ಹಾಗೂ ಸಹ ಉಸ್ತುವಾರಿಗಳಾಗಿರುವ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಮತ್ತು ಪಿಯೂಷ್‌ ಗೋಯಲ್‌ ಅವರ ವಾಸಕ್ಕೂ ಪ್ರತ್ಯೇಕ ಮನೆಗಳನ್ನು ನಿಗದಿಪಡಿಸಲಾಗಿದೆ.

ಉಭಯ ಸಚಿವರು ರಾಜ್ಯಕ್ಕೆ ಆಗಮಿಸಿದ ವೇಳೆ ಈಗ ಆ ಮನೆಗಳಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. ಏಪ್ರಿಲ್‌ ಮೊದಲ ವಾರದ ನಂತರ ಇವರು ಕೂಡ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂದುವೋ, ಜೈನರೋ?

ಅಮಿತ್‌ ಶಾಗೆ ನನ್ನನ್ನು ಕಂಡರೆ ಭಯ. ಆದ್ದರಿಂದ ನಾನು ಎಲ್ಲಿ ಹೋಗುತ್ತೇನೋ ಅಲ್ಲಿ ಹಿಂಬಾಲಿಸುತ್ತಾರೆ. ನನ್ನನ್ನು ಅಹಿಂದು ಎಂದು ಕರೆಯುತ್ತಿರುವ ಅಮಿತ್‌ ಶಾ ಹಿಂದುವೋ ಅಥವಾ ಜೈನರೋ ಎಂಬುದನ್ನು ಸ್ಪಷ್ಟಪಡಿಸಲಿ.

- ಸಿದ್ದರಾಮಯ್ಯ, ಮುಖ್ಯಮಂತ್ರಿ