ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾಗಿ ತಿಂಗಳು ಕಳೆದರೂ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ ಎಂದು ಸಾರ್ವತ್ರಿಕವಾಗಿ ಮಾತು ಕೇಳಿಬರುತ್ತಿದೆ. ಹೀಗಾಗಿಯೇ ಏನೋ ಅಮಿತ್ ಶಾ ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಕಾಮನ್ ಫ್ರೆಂಡ್ಸ್ ಮೂಲಕ ಈಗಲೂ ಸಂಪರ್ಕದಲ್ಲಿದ್ದಾರೆ.

ಪ್ರಶಾಂತ್ ನಾತು

ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾಗಿ ತಿಂಗಳು ಕಳೆದರೂ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ ಎಂದು ಸಾರ್ವತ್ರಿಕವಾಗಿ ಮಾತು ಕೇಳಿಬರುತ್ತಿದೆ. ಹೀಗಾಗಿಯೇ ಏನೋ ಅಮಿತ್ ಶಾ ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಕಾಮನ್ ಫ್ರೆಂಡ್ಸ್ ಮೂಲಕ ಈಗಲೂ ಸಂಪರ್ಕದಲ್ಲಿದ್ದಾರೆ. 

ಕಾಂಗ್ರೆಸ್ ಜೊತೆ ಏನೇ ಸಮಸ್ಯೆಗಳಾದರೂ ನಾವು ನಿಮ್ಮ ಜೊತೆ ಸರ್ಕಾರ ರಚಿಸಲು ತಯಾರಿದ್ದೇವೆ ಎಂದು ಶಾ ಅವರು ಕುಮಾರಸ್ವಾಮಿ ಅವರಿಗೆ ನೇರವಾಗಿ ಹೇಳಿದ್ದಾರಂತೆ. ಆದರೆ ದೇವೇಗೌಡರಿಗೆ ಹಿಂದೆಯೂ ಇಷ್ಟವಿರಲಿಲ್ಲ, ಈಗಲೂ ಇಷ್ಟವಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಲೇ ಬರುತ್ತಿದ್ದಾರಂತೆ. ಅಂದ ಹಾಗೆ ಅಮಿತ್ ಶಾಗೆ ಕಣ್ಣಿರುವುದು ಕರ್ನಾಟಕದ 28 ಲೋಕಸಭಾ ಸೀಟ್‌ಗಳ ಮೇಲೆ. ಒಂದು ವೇಳೆ ಲೋಕಸಭಾ ಚುನಾವಣೆಗಿಂತ ಮೊದಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದರೆ 28ರಲ್ಲಿ 20ಕ್ಕೂ ಹೆಚ್ಚು ಗೆಲ್ಲಬಹುದು.

ಅದೇ ಬಿಜೆಪಿ-ಜೆಡಿಎಸ್ ಮೈತ್ರಿ ಉಂಟಾದರೆ 23-24ರ ವರೆಗೆ ಗೆಲ್ಲಬಹುದು ಎಂಬ ಅಂದಾಜಿನ ಮೇಲೆ ಮೋದಿ, ಅಮಿತ್ ಶಾ ಇನ್ನೂ ಕರ್ನಾಟಕದ ಮೇಲೆ ಕಣ್ಣಿಟ್ಟೇ ಕುಳಿತಿದ್ದಾರೆ. ಅಂದಹಾಗೆ ನಿನ್ನೆ ಕುಮಾರಸ್ವಾಮಿ, ಮೋದಿ ಅವರನ್ನು ಭೇಟಿಯಾಗಲು ಹೋದಾಗ ಪ್ರಧಾನಿಗಳು ದೇವೇಗೌಡರು ನೀರಾವರಿ ವಿಚಾರದಲ್ಲಿ ವಿಶ್ವಕೋಶ ಇದ್ದ ಹಾಗೆ ಎಂದು ಹೊಗಳಿಯೇ ಮಾತು ಆರಂಭಿಸಿದರಂತೆ. 

ಕನ್ನಡ ಪ್ರಭದಲ್ಲಿ ಪ್ರಕಟವಾದ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ