ವೀರಶೈವ ಲಿಂಗಾಯತ ಸಮುದಾಯದ ಪವಿತ್ರ ಧಾರ್ಮಿಕ ಕ್ಷೇತ್ರ ಎಂದೇ ಗುರುತಿಸಲ್ಪಡುವ ಬಾಗಲ​ಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಗಳ ಸಂಘಟನೆಯಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಬೃಹತ್‌ ಸಮಾವೇಶ ಯಶಸ್ವಿಯಾದ ಬೆನ್ನಲ್ಲೇ ಶುಕ್ರವಾರ ದೆಹಲಿಯಲ್ಲಿ ಅದರ ಭವಿಷ್ಯವೂ ನಿರ್ಧಾರವಾಗುವ ಸಾಧ್ಯತೆಯಿದೆ. ಬ್ರಿಗೇಡ್ ‌ ಹುಟ್ಟುಹಾಕಿರುವ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಬ್ಬರ ನಡುವಿನ ತೀವ್ರ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಂಧಾನ ಸಭೆ ನಡೆಸಲಿದ್ದು, ಕೇವಲ ಬಿಜೆಪಿ ಪಾಳೆಯದಲ್ಲಷ್ಟೇ ಅಲ್ಲದೆ ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟುಕುತೂಹಲ ಕೆರಳಿಸಿದೆ

ನವದೆಹಲಿ(ಜ.27): ವೀರಶೈವ ಲಿಂಗಾಯತ ಸಮುದಾಯದ ಪವಿತ್ರ ಧಾರ್ಮಿಕ ಕ್ಷೇತ್ರ ಎಂದೇ ಗುರುತಿಸಲ್ಪಡುವ ಬಾಗಲ​ಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಗಳ ಸಂಘಟನೆಯಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಬೃಹತ್‌ ಸಮಾವೇಶ ಯಶಸ್ವಿಯಾದ ಬೆನ್ನಲ್ಲೇ ಶುಕ್ರವಾರ ದೆಹಲಿಯಲ್ಲಿ ಅದರ ಭವಿಷ್ಯವೂ ನಿರ್ಧಾರವಾಗುವ ಸಾಧ್ಯತೆಯಿದೆ. ಬ್ರಿಗೇಡ್‌ ಹುಟ್ಟುಹಾಕಿರುವ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಬ್ಬರ ನಡುವಿನ ತೀವ್ರ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಂಧಾನ ಸಭೆ ನಡೆಸಲಿದ್ದು, ಕೇವಲ ಬಿಜೆಪಿ ಪಾಳೆಯದಲ್ಲಷ್ಟೇ ಅಲ್ಲದೆ ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟುಕುತೂಹಲ ಕೆರಳಿಸಿದೆ.

Add Asianetnews Kannada as a Preferred SourcegooglePreferred

ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದರ ಕೇಂದ್ರ ಬಿಂದುಗಳಾಗಿರುವ ಯಡಿಯೂರಪ್ಪ, ಈಶ್ವರಪ್ಪ, ರಾಜ್ಯದವರೇ ಆಗಿರುವ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಶುಕ್ರವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲೇ ಇರುವ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಅವರೂ ಸಭೆಯಲ್ಲಿ ಜತೆಗೂಡಲಿದ್ದಾರೆ.

ಸಂಜೆ ದೆಹಲಿಯ ಅಕ್ಬರ್‌ ರಸ್ತೆಯಲ್ಲಿನ ತಮ್ಮ ನಿವಾಸ​ದಲ್ಲೇ ಸಭೆ ಕರೆದಿರುವ ಅಮಿತ್‌ ಶಾ ಅವರು ವಿವರ​ವಾದ ಅಭಿಪ್ರಾಯ ಸಂಗ್ರಹಿಸಿದ ನಂತರ ಬ್ರಿಗೇಡ್‌ ವಿರೋಧಿ​ಸುತ್ತಿರುವ ಯಡಿಯೂರಪ್ಪ ಅವರನ್ನು ಸಮಾಧಾನ​ಗೊಳಿಸುತ್ತಾರೆಯೇ ಅಥವಾ ಬ್ರಿಗೇಡ್‌ನಿಂದ ಹಿಂದೆ ಸರಿಯು​ವುದಿಲ್ಲ ಎನ್ನುತ್ತಿರುವ ಈಶ್ವರಪ್ಪ ಅವರನ್ನು ಮೆತ್ತ​ಗಾಗಿ​ಸುತ್ತಾರೆಯೇ ಎಂಬುದು ಕುತೂಹಲಕರವಾಗಿದೆ.

ಬ್ರಿಗೇಡ್‌ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಉದ್ಭವಿಸಿರುವ ಬಿಕ್ಕಟ್ಟು ತಾರ್ಕಿಕ ಹಂತಕ್ಕೆ ತಲುಪಿರುವುದರಿಂದ ಬಿಕ್ಕಟ್ಟು ನಿವಾರಣೆಗೆ ರಾಜ್ಯ ನಾಯಕರು ಹಾಗೂ ಸಂಘ ಪರಿವಾರದ ಮುಖಂಡರೂ ಅಸಹಾಯಕರಾಗಿ ಕೈಚೆಲ್ಲಿದ್ದಾರೆ. ಹೀಗಾಗಿ ಅಮಿತ್‌ ಶಾ ಇದನ್ನು ಹೇಗೆ ನಿಭಾಯಿಸುತ್ತಾರೆ? ಉಭಯ ನಾಯಕರ ಪೈಕಿ ಒಬ್ಬರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾ​ಗುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದೂ ಅಲ್ಲದೆ, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದು ಖುದ್ದು ಅಮಿತ್‌ ಶಾ. ಇದೀಗ ಆ ಯಡಿಯೂರಪ್ಪ ಅವರ ಕಾರ್ಯವೈಖರಿ ಪ್ರಶ್ನಿಸಿ, ಅವರ ವಿರುದ್ಧ ಪರೋಕ್ಷವಾಗಿ ಬಂಡಾಯವನ್ನೇ ಸಾರಿರುವ ಈಶ್ವರಪ್ಪ ಹಾಗೂ ಅವರ ಬ್ರಿಗೇಡ್‌ ಚಟುವಟಿಕೆ​ಗಳಿಗೆ ಸಂಘ ಪರಿವಾರದ ಬೆಂಬಲ ಇದೆ ಎಂಬುದು ಗುಟ್ಟಿನ ಸಂಗತಿಯೇನಲ್ಲ. ಹೀಗಿರುವಾಗ, ಸಂಘ ಪರಿವಾರವನ್ನು ಕಡೆಗಣಿಸಿ ಈಶ್ವರಪ್ಪ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಾರೆಯೇ ಎಂಬುದು ಅನುಮಾನ. ಹೀಗಾಗಿ, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರಿಬ್ಬರಿಗೂ ಒಪ್ಪಿಗೆಯಾ​ಗು​ವಂಥ ಸಂಧಾನ ಸೂತ್ರ ರೂಪಿಸು​ವತ್ತ ಒತ್ತು ನೀಡಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಮುಕುಂದ್‌ ಭಾಗಿ?: ಶುಕ್ರವಾರದ ಸಂಧಾನ ಸಭೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯದ ಸಂಘ ಪರಿವಾರದ ಮುಖಂಡ ಮುಕುಂದ್‌ ಅವರನ್ನೂ ಆಹ್ವಾನಿಸಿದ್ದಾರೆ ಎನ್ನಲಾ​ಗಿದ್ದು, ಇದು ಈಶ್ವರಪ್ಪ ಅವರಿಗೆ ಬಲ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯ ರಾಜ್ಯದ ಸಂಘ ಪರಿವಾರದಲ್ಲಿ ಮುಕುಂದ್‌ ಪ್ರಭಾವಿ ಮುಖಂಡರು. ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಅವರು ರಾಜ್ಯಕ್ಕೆ ಆಗಮಿಸಿ ಯಡಿ​ಯೂರಪ್ಪ ಮತ್ತು ಈಶ್ವರಪ್ಪ ಅವರಿಬ್ಬರಿಗೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿ​ದಾಗ ಮಧ್ಯಸ್ಥಿಕೆ ವಹಿಸಿದ್ದು ಇದೇ ಮುಕುಂದ್‌.

ಆಗ ಮುಕುಂದ್‌ ಅವರು ಈಶ್ವರ​ಪ್ಪಗೆ ಪಕ್ಷದ ಒಬಿಸಿ, ಎಸ್‌ಸಿ ಹಾಗೂ ಎಸ್‌ಟಿ ಮೋರ್ಚಾಗಳ ಉಸ್ತುವಾರಿ ನೀಡುವುದೂ ಸೇರಿದಂತೆ ಹಲವು ಸಲಹೆ​ಗಳನ್ನು ನೀಡಿದ್ದರು. ಅದಕ್ಕೆ ಸಭೆ​ಯಲ್ಲಿ ಒಪ್ಪಿಗೆ ನೀಡಿದ್ದ ಯಡಿಯೂ​ರಪ್ಪ ಅವರು ನಂತರ ಪಾಲಿಸಿರಲಿಲ್ಲ. ಇದು ಈಶ್ವರಪ್ಪ ಅವರ ಆಕ್ರೋಶಕ್ಕೂ ಕಾರಣವಾಗಿ ಬ್ರಿಗೇಡ್‌ ಚಟುವಟಿ​ಕೆಗಳನ್ನು ತೀವ್ರಗೊಳಿಸಿದ್ದರು ಎನ್ನಲಾ​ಗಿದೆ. ಈ ಸಭೆಯ ಬಗ್ಗೆ ಆಗ ಮು​ಕುಂದ್‌ ಅವರು ರಾಮ್‌ಲಾಲ್‌ ಅವ​ರಿಗೆ ಮಾಹಿತಿಯನ್ನೂ ನೀಡಿ​ದ್ದರು. ಇದೀಗ ಅಮಿತ್‌ ಶಾ ಸಂಧಾನ ಸಭೆಗೆ ಮುಕುಂದ್‌ ಅವರಿಗೂ ಆಹ್ವಾನ ನೀಡಿರುವುದು ಕುತೂಹಲಕರ ವಾಗಿದೆ.

2 ಹಂತದ ಸಭೆ? ರಾಜ್ಯ ಬಿಜೆಪಿಯ ಬಿಕ್ಕಟ್ಟು ಬಗೆಹರಿಸಲು ಪಕ್ಷದ ರಾಷ್ಟ್ರೀ​ಯ ಅಧ್ಯಕ್ಷ ಅಮಿತ್‌ ಶಾ ಅವರು ಕರೆದಿರುವ ಸಭೆ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಅಂದರೆ, ಅಮಿತ್‌ ಶಾ ಅವರು ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿ​ಸ​ಲಿ​ದ್ದಾರೆ. ಮೊದಲು ಈಶ್ವರಪ್ಪ ಮತ್ತು ಸಂತೋಷ್‌ ಅವರಿಂದ ಅಭಿ​ಪ್ರಾಯ ಸಂಗ್ರಹ. ನಂತರ ರಾಮ್‌ಲಾಲ್‌, ಮುರಳೀಧರರಾವ್‌ ಅವ​ರೊಂ​ದಿಗೆ ಮಾತುಕತೆ. ಅಂತಿಮವಾಗಿ ಯಡಿಯೂರಪ್ಪ ಸೇರಿದಂತೆ ಎಲ್ಲ ಮುಖಂಡರನ್ನು ಒಳಗೊಂಡು ಸಭೆ ನಡೆಸಿ ಸಂಧಾನ ಸೂತ್ರ ಸಿದ್ಧಪಡಿ​ಸಲಿದ್ದಾರೆ ಎನ್ನಲಾಗಿದೆ.