850 ಅನ್ನದಾತರ ಸಾಲ ತೀರಿಸಲು ತಾವು ನಿರ್ಧರಿಸಿದ್ದು, ಅಂಥ ರೈತರ ಪಟ್ಟಿಯೊಂದನ್ನು ಸಿದ್ಧಪಡಿಸಿರುವುದಾಗಿ ಬಚ್ಚನ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. 

ಮುಂಬೈ: ಸಂಕಷ್ಟಕ್ಕೀಡಾಗಿರುವ ಉತ್ತರ ಪ್ರದೇಶದ ರೈತರ ನೆರವಿಗೆ ನಟ ಅಮಿತಾಭ್‌ ಬಚ್ಚನ್‌ ಮುಂದಾಗಿದ್ದಾರೆ. 

ರಾಜ್ಯದ 850 ಅನ್ನದಾತರ ಸಾಲ ತೀರಿಸಲು ತಾವು ನಿರ್ಧರಿಸಿದ್ದು, ಅಂಥ ರೈತರ ಪಟ್ಟಿಯೊಂದನ್ನು ಸಿದ್ಧಪಡಿಸಿರುವುದಾಗಿ ಬಚ್ಚನ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. 

‘ನಮಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ರೈತರಿಗಾಗಿ ಒಂದಿಷ್ಟುಕೊಟ್ಟಾಗ ಜೀವನ ಸಾರ್ಥಕವೆನಿಸುತ್ತದೆ. ಮಹಾರಾಷ್ಟ್ರದಲ್ಲಿ ಸಾಲ ಕಟ್ಟಲು ಕಷ್ಟಪಡುತ್ತಿದ್ದ 350 ರೈತರ ಸಾಲ ತೀರಿಸಿದ್ದೇನೆ. ಅದೇ ರೀತಿ ಇದೀಗ 5.5 ಕೋಟಿ ಸಾಲ ಇರುವ ಉತ್ತರ ಪ್ರದೇಶದ 850 ರೈತರ ಪಟ್ಟಿಯೊಂದನ್ನು ತರಿಸಿಕೊಂಡಿದ್ದೇನೆ,’ ಎಂದು ಹೇಳಿದ್ದಾರೆ.

ಅಲ್ಲದೆ, ಬಲವಂತದ ವೇಶ್ಯಾವಾಟಿಕೆ ವಿರುದ್ಧ ಮತ್ತು ಅಪಹರಣಕ್ಕೊಳಗಾಗುವ ಯುವತಿಯರನ್ನು ರಕ್ಷಣೆ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಅಜೀತ್‌ ಸಿಂಗ್‌ ಅವರಿಗೆ ನೆರವು ನೀಡುವುದಾಗಿಯೂ ಇದೇ ವೇಳೆ ಬಿಗ್‌ಬಿ ಹೇಳಿದ್ದಾರೆ.