ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು ಈ ವೇಳೆ ಮಹತ್ವದ ಚರ್ಚೆಗಳು ನಡೆಯಲಿವೆ.
ಮಂಗಳೂರು: ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಮಟ್ಟದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ವಿಶೇಷ ವರ್ಗದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ವರ್ಷಂಪ್ರತಿ ನಡೆಯುವ ಆರ್‌ಎಸ್‌ಎಸ್ ವಿಶೇಷ ವರ್ಗ ಈ ಬಾರಿ ದೇಶದ ಎರಡು ಕಡೆಗಳಲ್ಲಿ ನಡೆಯುತ್ತಿದೆ.
ಅರ್ಧ ಭಾರತದ್ದು ವಾರಾಣಸಿ ಮತ್ತು ಇನ್ನರ್ಧ ಭಾಗದ ವಿಶೇಷ ವರ್ಗ ಮಂಗಳೂರಿನಲ್ಲಿ ನಡೆಯುತ್ತಿದೆ. ಭಾನುವಾರದಿಂದ ವಿಶೇಷ ವರ್ಗ ಆರಂಭವಾಗಿದ್ದು, ಸಂಘ ಹಾಗೂ ಸಂಘ ಪರಿವಾರ ಸಂಘಟನೆಗಳ ಸಂಘಟನಾತ್ಮಕ ದೃಷ್ಟಿಯಿಂದ ಚರ್ಚೆಗಳು ನಡೆಯುತ್ತಿದೆ. ವಾರಾಣಸಿಯಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ ಭಾಗವತ್ ಹಾಗೂ ಮಂಗಳೂರಿನಲ್ಲಿ ಸರಕಾರ್ಯವಾಹ ಭಯ್ಯಾಜಿ ಜೋಶಿ ನೇತೃತ್ವದಲ್ಲಿ ವಿಶೇಷ ವರ್ಗ ನಡೆಯುತ್ತಿದೆ.
ಅಮಿತ್ ಶಾ ಪಾಲ್ಗೊಳ್ಳುವ ವಿಶೇಷ ವರ್ಗದಲ್ಲಿ ಬಿಜೆಪಿ ಸಂಘಟನೆ ಹಾಗೂ ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಹಾಗೂ ಮುಂದಿನ ಕಾರ್ಯಯೋಜನೆಗಳ ವಿಸ್ತೃತ ಚರ್ಚೆ ನಡೆಯಲಿದೆ. ಮುಖ್ಯವಾಗಿ ಆರ್‌ಎಸ್‌ಎಸ್ ಆರಂಭಿಸಿದ ಅಯೋಧ್ಯೆ ಮಂದಿರ ನಿರ್ಮಾಣ ವಿಚಾರ, ಶಬರಿಮಲೆ ವಿವಾದ ಹಾಗೂ 2019ರ ಲೋಕಸಭಾ ಚುನಾವಣೆ ಬಗ್ಗೆ ಗಹನವಾದ ಚರ್ಚೆ ನಡೆಯುವ ಸಂಭವ ಇದೆ ಎನ್ನಲಾಗಿದೆ.
ದೇಶದ 20ಕ್ಕೂ ಅಧಿಕ ರಾಜ್ಯಗಳಿಂದ ಪ್ರತಿದಿನ 200ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ವಿವಿಧ ಸಂಘಟನೆಗಳ ಪ್ರಮುಖರನ್ನು ವಿಶೇಷ ವರ್ಗಕ್ಕೆ ಆಹ್ವಾನಿಸಲಾಗಿದೆ. ಈ ವಿಶೇಷ ವರ್ಗ ನ.15ರಂದು ಸಮಾಪನಗೊಳ್ಳಲಿದೆ.
